ಬೆಂಗಳೂರು: ಕೊರೊನಾ ಎಫೆಕ್ಟ್ ಹಬ್ಬಹರಿದಿನಗಳಿಗೆ ತಟ್ಟಿದೆ. ವರಮಹಾಲಕ್ಷ್ಮೀಹಬ್ಬ, ಗಣೇಶ್ ಚತುರ್ಥಿ, ಶ್ರೀಕೃಷ್ಣಜನ್ಮಾಷ್ಟಮಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ. ಶ್ರೀಕೃಷ್ಣಜನ್ಮಾಷ್ಟಮಿಗೆ ಈಗಾಗಲೇ ಇಸ್ಕಾನ್‍ನಲ್ಲಿ ಸಿದ್ಧತೆ ಆರಂಭಿಸಲಾಗಿದೆ.
ಕೊರೊನಾದಿಂದ ಈ ಬಾರಿ ಇಸ್ಕಾನ್‍ನಲ್ಲಿ ನೇರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಆದರೆ ಆನ್‍ಲೈನ್ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆಗಸ್ಟ್ 11, 12 ರಂದು ನಡೆಯುವ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳನ್ನ ಯೂಟ್ಯೂಬ್, ಫೇಸ್‍ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ವೀಕ್ಷಿಸಬಹುದಾಗಿದೆ.
ಶ್ರೀರಾಧಾಕೃಷ್ಣಚಂದ್ರ ದೇವರಿಗೆ ಮಾಡುವ ಅಭಿಷೇಕವನ್ನ ನೇರಪ್ರಸಾರ ಮಾಡಲಾಗುತ್ತದೆ ಎಂದು ಇಸ್ಕಾನ್ ಆಡಳಿತ ಮಂಡಳಿ ಪತ್ರದ ಮೂಲಕ ತಿಳಿಸಿದೆ.
ಪತ್ರದಲ್ಲಿ ಏನಿದೆ?
ಆಗಸ್ಟ್ 11 ಮತ್ತು 12 ರಂದು ನಡೆಯುವ ಶ್ರೀಕೃಷ್ಣಜನ್ಮಾಷ್ಟಮಿಯ ಕಾರ್ಯಕ್ರಮಗಳನ್ನು ಸುಮಾರು 20 ಗಂಟೆಗಳ ಕಾಲ ಇಸ್ಕಾನ್-ಬೆಂಗಳೂರು ಯೂಟ್ಯೂಬ್ ಚಾನಲ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಟ್ವಿಟ್ಟರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಶ್ರೀ ಕೃಷ್ಣನಿಗೆ ನಡೆಯುವ ವೈಭವೋಪೇತ ಅಭಿಷೇಕವನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಹೆಸರಾಂತ ಕಲಾವಿದರಿಂದ ಲೈವ್ ಸಂಗೀತ ಕಾರ್ಯಕ್ರಮಗಳು ಇರುತ್ತವೆ ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.