ನವದೆಹಲಿ: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.
ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಅಂದರೆ 1999ರ ಜುಲೈ 26ರಂದು 60 ದಿನಗಳ ಕಾರ್ಗಿಲ್ ಕದನ ಅಂತ್ಯವಾಗಿತ್ತು. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತಿದೆ.ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು, ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ. ಭಾರತೀಯರು ಸೋಶಿಯಲ್ ಮೀಡಿಯಾದ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಏನಿದು ಕಾರ್ಗಿಲ್ ವಿಜಯ್ ದಿವಸ್?
1999ರ ಮೇ ಮತ್ತು ಜುಲೈನ 2 ತಿಂಗಳುಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು.
ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ ‘ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡುತ್ತಾ ಸೇನೆ ಬರುತ್ತಿದೆ