Breaking News

ಖಾಸಗಿ ಆಸ್ಪತ್ರೆಗಳವರ ಕರಾಳ ಮುಖಗಳು ಒಂದೊಂದೇ ಬಯಲಾಗತೊಡಗಿವೆ.

Spread the love

ಬೆಂಗಳೂರು,ಜು.25- ಖಾಸಗಿ ಆಸ್ಪತ್ರೆಗಳವರ ಕರಾಳ ಮುಖಗಳು ಒಂದೊಂದೇ ಬಯಲಾಗತೊಡಗಿವೆ. ಕೋವಿಡ್ ಪೇಷೆಂಟ್‍ಗಳಿಗೆ ಹಾಸಿಗೆ ಕೊರತೆ ನೆಪ ಹೇಳಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸರ್ಕಾರ ಬ್ರೇಕ್ ಹಾಕುತ್ತಿದ್ದಂತೆ ನಾನ್ ಕೋವಿಡ್ ಪೇಷೆಂಟ್‍ಗಳಿಗೆ ಕೊರೋನಾ ಸೋಂಕಿನ ಭಯ ಮೂಡಿಸಿ ಸುಲಿಗೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಖಾಸಗಿ ಆಸ್ಪತ್ರೆಯವರು ರಂಗೋಲಿ ಕೆಳಗೆ ನುಸುಳಿ ತಮ್ಮ ಸುಲಿಗೆ ದಂಧೆಯನ್ನು ಮುಂದುವರೆಸಿದ್ದಾರೆ.ಕೊರೋನಾ ಸೋಂಕು ಹೆಚ್ಚಾದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲದಿದ್ದಾಗ ಸರ್ಕಾರ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿತ್ತು.

ಮಾರ್ಗಸೂಚಿಗಳನ್ನು ರೂಪಿಸಿ ದರ ನಿಗದಿ ಮಾಡಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯವರಿಗೆ ಸೂಚಿಸಿತ್ತು.ಆದರೆ ಎಂದಿನಂತೆ ಖಾಸಗಿ ಆಸ್ಪತ್ರೆಗಳು ತಮ್ಮ ಸುಲಿಗೆ ಧೋರಣೆಯನ್ನು ಮುಂದುವರೆಸಿವೆ.

ಬೆಡ್‍ಗಳ ಕೊರತೆಯ ನೆಪ ಹೇಳಿ ವಾಮ ಮಾರ್ಗದ ಮೂಲಕ ಹಣ ಪೀಕುವ ದಂಧೆ ನಡೆಸುತ್ತಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ನಿನ್ನೆ ಐಎಎಸ್, ಐಪಿಎಸ್ ಅಧಿಕಾರಿಗಳು ಹಲವು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು.

ಆಸ್ಪತ್ರೆಗಳಲ್ಲಿ ಕೋವಿಡ್ ಪೇಷೆಂಟ್‍ಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಲ್ಲಿ ಬೆಡ್‍ಗಳ ಮಾಹಿತಿ ಡಿಸ್‍ಪ್ಲೇ ಮಾಡಬೇಕು. ಕೋವಿಡ್, ನಾನ್ ಕೋವಿಡ್ ರೋಗಿಗಳ ಸಂಪೂರ್ಣ ವಿವರಗಳನ್ನು ನೀಡಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.

ಸರ್ಕಾರದ ಶಿಫಾರಸಿನಿಂದಾಗಿ ರೋಗಿಗಳಿಂದ ಹೆಚ್ಚು ಹಣ ಪೀಕಲು ಸಾಧ್ಯವಿಲ್ಲವೆಂದರಿತ ಖಾಸಗಿ ಆಸ್ಪತ್ರೆಗಳವರು ಅನ್ಯ ಮಾರ್ಗ ಬಳಸಿ ಹಣ ಮಾಡಲು ಮುಂದಾಗಿದ್ದಾರೆ.

ಆಸ್ಪತ್ರೆಗೆ ಬರುವ ಅನ್ಯ ರೋಗಿಗಳು ಸ್ವಲ್ಪ ಸ್ಥಿತಿವಂತರಂತೆ ಕಂಡುಬಂದರೆ ಅವರಿಗೆ ಕೊರೋನಾ ಭಯ ಮೂಡಿಸಿ ಸುಲಿಗೆ ದಂಧೆ ಆರಂಭಿಸಿರುವ ಹಲವು ಪ್ರಕರಣ ಕಂಡು ಬಂದಿದೆ. ಜನರು ಎಚ್ಚರಿಕೆಯಿಂದ ಇರಬೇಕಿದೆ.

ತಮಗೆ ಕೊರೋನಾ ಪಾಸಿಟಿವ್ ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಎಂದು ಚಿಕಿತ್ಸೆ ನೀಡಿ ಹಣ ಪೀಕುವ ದಂಧೆಗೆ ಖಾಸಗಿ ಆಸ್ಪತ್ರೆಯವರು ಇಳಿದಿದ್ದಾರೆ.

ಬಿಲ್ ಕೊಡದಿದ್ದಕ್ಕೆ ಮೃತ ದೇಹಗಳನ್ನು ಕೆಲವು ಆಸ್ಪತ್ರೆಗಳವರು ಕೊಡದೆ ಅಮಾನವೀಯವಾಗಿ ವರ್ತಿಸಿರುವ ಹಲವು ಘಟನೆಗಳು ನಡೆದಿವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೆಲಸವಿಲ್ಲದೆ ಮೂರ್ನಾಲ್ಕು ತಿಂಗಳುಗಳಿಂದ ಮುಚ್ಚಿದ್ದವು. ಈಗ ಲಾಕ್‍ಡೌನ್ ತೆರವಾಗುತ್ತಿದ್ದಂತೆ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿವೆ.

ವಿದೇಶದಿಂದ, ಹೊರ ರಾಜ್ಯಗಳಿಂದ ಬಂದು ಸೋಂಕಿತರಾದವರು ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರ್ಕಾರದಿಂದ ಶಿಫಾರಸ್ಸಾಗಿಲ್ಲದವರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಲ್ತ್ ಇನ್ಸುರೆನ್ಸ್ ಕಾರ್ಡ್ ಮೂಲಕ ಸಾಕಷ್ಟು ಹಣ ವಸೂಲಿ ಮಾಡಿದ್ದಾರೆ.

ಅಲ್ಲದೆ ವಿವಿಧ ಮೂಲಗಳಿಂದಲೂ ಹಣ ವಸೂಲಿ ಮಾಡಿದ್ದಾರೆ. ಈಗ ಸೋಂಕಿನ ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿವೆ.

ಆಸ್ಪತ್ರೆಗೆ ಸೇರಿಸುವಾಗ ಗುರುತಿನ ಚೀಟಿ, ಐಡಿ ಕಾರ್ಡ್, ವಿಳಾಸ ಪಡೆಯುತ್ತಾರೆ. ಈ ಸಂದರ್ಭದಲ್ಲೇ ಅವರ ಆದಾಯದ ಮೂಲ ಕೂಡ ಪತ್ತೆಯಾಗುತ್ತವೆ. ಅಂತಹವರಿಂದ ಹಣವನ್ನು ಹೇಗೆ ವಸೂಲಿ ಮಾಡಬೇಕೆಂಬ ಲೆಕ್ಕಾಚಾರವನ್ನು ಮೊದಲೇ ಹಾಕಿರುತ್ತಾರೆ. ಕೋವಿಡ್‍ನ ಈ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಒಂದು ಸುಗ್ಗಿಯಾಗಿ ಪರಿಣಮಿಸಿದೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ