ಚಿಕ್ಕೋಡಿ(ಬೆಳಗಾವಿ): ಮಳೆಗಾಲ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುತ್ತೆ. ಇಂಥ ಸಂದರ್ಭದಲ್ಲಿ ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸವನ್ನ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ.
ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಶ್ರೀಗಳು ಬಂದರೆ ಅವರ ಸುತ್ತ ನೂರಾರು ಪಾರಿವಾಳಗಳು ಜಮಾವಣೆಗೊಳ್ಳುತ್ತವೆ. ಆ ಪಾರಿವಾಳಗಳಿಗೆ ಸ್ವಾಮಿಜಿ ಜೋಳ ಹಾಗೂ ಅಕ್ಕಿ ಕಾಳುಗಳನ್ನ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಆಹಾರ-ಹನಿ ನೀರು ಸಿಗದೆ ಪಕ್ಷಿಗಳು ಅಲೆದಾಡುವ ಮೂಕವೇದನೆ ಗಮನಿಸಿ ಸ್ವಾಮೀಜಿ ನಿತ್ಯ ಪಾರಿಜಾತ-ಗುಬ್ಬಿಗಳಿಗೆ ಅಕ್ಕಿಕಾಳು ಹಾಗೂ ನೀರಿನ ತೊಟ್ಟಿ ನಿರ್ಮಿಸಿ ಮೆರೆಯುತ್ತಿದ್ದಾರೆ.
ನಿತ್ಯ ಆಹಾರ ಅರಸಿ ಬರುವ ನೂರಾರು ಪಾರಿವಾಳ ಹಾಗೂ ಗುಬ್ಬಿಗಳಿಗೆ ಆಹಾರ ಹಾಗೂ ನೀರಿಗಾಗಿಯೇ ಸ್ವಂತ ನೆಲೆಯೊಂದು ನಿರ್ಮಿಸಿಕೊಟ್ಟಿದ್ದಾರೆ. ಪ್ರತಿ ದಿನ ಎರಡು ಬಾರಿ ಅಕ್ಕಿಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ತಾವೇ ಸ್ವತಃ ಪಕ್ಷಿ ನೀಡಿ ಪಕ್ಷಿಗಳ ಚಿಲಿಪಿಲಿ ಸದ್ದಿನಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದಾರೆ.
ಪಕ್ಷಿಗಳಿಗೆ ತುತ್ತು ಅನ್ನ, ಕಾಳುಕಡ್ಡಿ, ನೀರು ಕೊಡುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಸ್ವಾಮೀಜಿ ಕಳೆದ 25 ವರ್ಷಗಳಿಂದಲೂ ಮಠ ಮೇಲ್ಛಾವಣಿಯಲ್ಲಿ ಧಾನ್ಯಗಳನ್ನು ಹಾಕುತ್ತಾರೆ. ಕೆಳಭಾಗದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಸ್ವಾಮೀಜಿ ನಿತ್ಯದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಮಠದಲ್ಲಿರುವ ಅವರ ಶಿಷ್ಯದಿಂದಿರು ಈ ಕಾರ್ಯ ಮಾಡುತ್ತಾರೆ. ನಿತ್ಯ ಕೆಲಸದ ಒತ್ತಡದ ಮಧ್ಯೆಯೂ ನೂರಾರು ಪಕ್ಷಿಗಳಿಗೆ ಪಾತ್ರೆಗಳಲ್ಲಿ ನೀರು ಇಟ್ಟು, ಕಾಳು ಹಾಕಿದ್ದಾಗಲೇ ತಾವು ಉಪಹಾರ, ಊಟ ಮಾಡುವುದು ಎಂದು ಸ್ವಾಮೀಜಿ ಅಭಿಮಾನದಿಂದ ಹೇಳುತ್ತಾರೆ.
ಗುಬ್ಬಿ, ಪಾರಿವಾಳ ಸೇರಿದಂತೆ ಇನ್ನಿತರ ಪಕ್ಷಿಗಳಿಗೆ ಶ್ರೀಮಠವೇ ನೆಲೆಯಾಗಿಬಿಟ್ಟಿದ್ದು, ಇದಲ್ಲದೇ ಸುಮಾರು ನೂರು ಎಕರೆ ಶ್ರೀಮಠದ ಜಮೀನಿನಲ್ಲಿ ಗೋಶಾಲೆ ನಿರ್ಮಿಸಿ ಕಸಾಯಿಖಾನೆ ಸೇರುವ ನೂರಾರು ಗೋವುಗಳನ್ನು ಸಾಕಿ ಸಲಹುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನ ಸ್ವಾಮಿಜಿ ಮೆರೆದಿದ್ದಾರೆ.