ಬೆಂಗಳೂರು : ಸಿನಿಮಾ ಟಾಕೀಸ್ ಗಳಿಗೆ 50% ಪ್ರವೇಶ ವಿಧಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಸಂಬಂಧ ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ( ಏಪ್ರಿಲ್ 3) ಸಿಎಂ ಬಿಎಸ್‍ವೈ , ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವ ಅಪ್ಪು, ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗೆ ನೀಡಿರುವ ಆದೇಶದಿಂದ ಉಂಟಾಗುವ ಸಂಕಷ್ಟದ ಕುರಿತು ಸಿಎಂ ಜತೆ ಚರ್ಚಿಸಿದ್ದಾರೆ. ಈಗಷ್ಟೇ ಕನ್ನಡ ಚಿತ್ರರಂಗ ಹಳಿಗೆ ಮರುಳುತ್ತಿದ್ದು, ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ನೀತಿ ಕನ್ನಡ ಚಿತ್ರರಂಗದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಪುನೀತ್ ರಾಜಕುಮಾರ್ ಅವರು ಮುಖ್ಯಮಂತ್ರಿಗಳಲ್ಲಿ ನಿವೇದಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಹಾಗೂ ಅದನ್ನೇ ನಂಬಿಕೊಂಡು ಜೀವನ ಕಟ್ಟಿಕೊಳ್ಳುತ್ತಿರುವ ನೂರಾರು ಕುಟುಂಬಗಳ ಹಿತದೃಷ್ಟಿಯಿಂದ ನೂತನ ಆದೇಶ ಹಿಂಪಡೆದು, ಹಾಗೂ 100% ಆಸನ ಭರ್ತಿಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಸರ್ಕಾರ ಚಿತ್ರಮಂದಿರಗಳಿಗೆ 50% ಸೀಟು ಭರ್ತಿಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಕನ್ನಡ ನಟರ, ನಿರ್ದೇಶಕರ ಒತ್ತಾಯದ ಮೇಲೆ ತನ್ನ ಆದೇಶ ಹಿಂಪಡೆದಿತ್ತು. ಆದರೆ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಶುಕ್ರವಾರ ಚಿತ್ರಮಂದಿರ, ಬಾರ್, ಪಬ್ ಗಳಿಗೆ ಸಂಬಂಧ ಪಟ್ಟಂತೆ ಹೊಸ ಆದೇಶ ಹೊರಡಿಸಿದೆ.
ಇನ್ನು ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾ ಬಿಡುಗಡೆಯಾಗಿ ಅಮೋಘ ಪ್ರದರ್ಶನ ಕಾಣುತ್ತಿದೆ. ಆದರೆ, ಸರ್ಕಾರ ಹೊರಡಿಸಿದ ಆದೇಶದಿಂದ ಚಿತ್ರತಂಡ ಆತಂಕಕ್ಕೆ ಒಳಗಾಗಿದೆ. ನಿನ್ನೆಯಿಂದ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್, ಸುದೀಪ್ , ರಕ್ಷಿತ್ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಸರ್ಕಾರಕ್ಕೆ ಆದೇಶ ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಸಿಎಂ ಭೇಟಿ ವೇಳೆ ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಂಗದೂರು ಹಾಜರಿದ್ದರು.
ಚಿತ್ರರಂಗದ ಹಾಗೂ ವಾಣಿಜ್ಯ ಮಂಡಳಿಯ ಮನವಿ ಮೇರೆಗೆ ಚಿತ್ರಮಂದಿರಗಳು ಶೇ.50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ನಿಯಮವನ್ನು ಬುಧವಾರ, ದಿನಾಂಕ 7 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. pic.twitter.com/6L3MihbRv2
— Dr Sudhakar K (@DrSudhakar_) April 3, 2021
Laxmi News 24×7