Breaking News

ಮೃತದೇಹಗಳಿಂದ ತುಂಬಿ ತುಳುಕುತ್ತಿವೆ ಶವಾಗಾರ, ಚಿತಾಗಾರ!

Spread the love

ದುರ್ಗ್ (ಛತ್ತೀಸಗಡ), ಏಪ್ರಿಲ್ 3: ಕೊರೊನಾ ವೈರಸ್ ಎರಡನೆಯ ಅಲೆಯು ದೇಶಾದ್ಯಂತ ಜನರನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ. ಕೋವಿಡ್ ಪ್ರಕರಣಗಳಲ್ಲಿ ಏಕಾಏಕಿ ಏರಿಕೆಯಾಗುತ್ತಿರುವುದು ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಸವಾಲುಗಳನ್ನು ಉಂಟುಮಾಡಿದೆ. ಛತ್ತೀಸಗಡ ದುರ್ಗ್ ಎಂಬ ಪುಟ್ಟ ಪಟ್ಟಣದಲ್ಲಿ ಉಂಟಾಗಿರುವ ಬಿಕ್ಕಟ್ಟು ಕಂಗೆಡಿಸುವಂತಿದೆ.

ದುರ್ಗ್ ಜಿಲ್ಲೆಯು ಛತ್ತೀಸಗಡದಲ್ಲಿ ಕೋವಿಡ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದ ಪ್ರದೇಶ. ಇಲ್ಲಿ ಎರಡನೆಯ ಅಲೆಯ ಹೊಡೆತ ದೊಡ್ಡ ವಿಪತ್ತುಗಳನ್ನು ತಂದೊಡ್ಡಿದೆ. ಕಳೆದ ಏಳು ದಿನಗಳಲ್ಲಿ ಕೋವಿಡ್‌ನಿಂದ 38 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಅಲ್ಲಿನ ಸ್ಥಳೀಯ ಶವಾಗಾರ ಜಾಗವಿಲ್ಲದೆ ತುಂಬಿಕೊಂಡಿದೆ. ಒಂದು ವಾರದಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಪಾಸಿಟಿವ್‌ಗೆ ಒಳಗಾಗಿರುವುದರಿಂದ ಆಸ್ಪತ್ರೆಗಳು ತುಂಬಿಕೊಂಡಿವೆ.

ಸೋಂಕು ಮತ್ತು ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಿ ಸರ್ಕಾರ ಆದೇಶಿಸಿದೆ. 500 ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಚಿಂತೆಗೀಡುಮಾಡಿದೆ.

ಶವಾಗಾರದಲ್ಲಿ ಎಂಟು ಫ್ರೀಜರ್‌ಗಳು ಮಾತ್ರ ಇವೆ. ಆದರೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಗಳ ನಿರ್ವಹಣೆ ಸಮಸ್ಯೆಯಾಗಿದೆ. ಇದುವರೆಗೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಶವಾಗಾರದಲ್ಲಿ ಮೃತದೇಹಗಳು ತುಂಬಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ದುರ್ಗ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪಿಆರ್ ಬಾಲಕಿಶೋರ್ ತಿಳಿಸಿದ್ದಾರೆ.

ಪ್ರತಿ ದಿನ ನಾಲ್ಕು ಅಥವಾ ಐದು ಮಂದಿ ಕೋವಿಡ್ ಸೋಂಕಿತರು ಸಾಯುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗಳ ಸ್ಥಿತಿ ಗಂಭೀರವಾದ ಬಳಿಕವೇ ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದಕ್ಕೆ ಕಾರಣ. ಆಸ್ಪತ್ರೆಗೆ ಬರುವಾಗ ಅವರ ಆಕ್ಸಿಜನ್ ಮಟ್ಟ ಶೇ 40 ಅಥವಾ 50ಕ್ಕೆ ಕುಸಿದಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ಶವಾಗಾರದಲ್ಲಿ ಮಾತ್ರವಲ್ಲ, ಸ್ಥಳೀಯ ಚಿತಾಗಾರದಲ್ಲಿಯೂ ಇಂತಹದೇ ಹೀನಾಯ ಸ್ಥಿತಿ ಇದೆ. ಪಿಪಿಇ ಕಿಟ್ ಧರಿಸಿದ ಜನರು ತಮ್ಮ ಮೃತ ಸಂಬಂಧಿಕರ ಅಂತ್ಯಕ್ರಿಯೆ ನಡೆಸುವ ದೃಶ್ಯಗಳು ದಾಖಲಾಗಿವೆ. ಅತ್ಯಂತ ಕಳವಳಕಾರಿ ಸನ್ನಿವೇಶ ಉಂಟಾಗಿರುವ 11 ರಾಜ್ಯಗಳಲ್ಲಿ ಛತ್ತೀಸಗಡವೂ ಒಂದು ಎಂದು ಕೇಂದ್ರ ಸರ್ಕಾರ ಪಟ್ಟಿ ಮಾಡಿದ್ದು, ವೈದ್ಯಕೀಯ ಪರಿಣತರ ತಂಡವನ್ನು ರಾಜ್ಯಕ್ಕೆ ರವಾನಿಸಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ