ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ಸಂದರ್ಭದಲ್ಲಿ ಏರಿಯಾ ಸೀಲ್ ಮಾಡುವ ಬದಲು ಮನೆ ಬಾಗಿಲನ್ನೇ ಸೀಲ್‍ಡೌನ್ ಮಾಡಿರುವ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

ಬಿಬಿಎಂಪಿಯ ಮಹಾ ಎಡವಟ್ಟು ಮಾಡಿಕೊಂಡಿದ್ದು, ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆ ಬಾಗಿಲಿಗೆ ಅಡ್ಡಲಾಗಿ ಕಬ್ಬಿಣದ ಶೀಟ್ ಅಳವಡಿಕೆ ಮಾಡಿದ್ದರು. ಆ ಮೂಲಕ ಸೋಂಕಿತ ವ್ಯಕ್ತಿ ಮನೆಯಿಂದ ಹೊರಬರದಂತೆ ಸೀಲ್‍ಡೌನ್ ಮಾಡಲಾಗಿತ್ತು. ಶಾಂತಿನಗರದ ಅಪಾರ್ಟ್‍ಮೆಂಟ್ ಒಂದರಲ್ಲಿ ಘಟನೆ ನಡೆದಿದೆ.ಅಧಿಕಾರಿಗಳ ಯಡ್ಡವಟ್ಟು ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹಂಚಿಕೊಂಡಿದ್ದರು. ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ, ಸೀಲ್‍ಡೌನ್ ಮಾಡಿದ್ದ ಮೂರು ಗಂಟೆಯ ಬಳಿಕ ಶೀಟನ್ನು ತೆರವು ಮಾಡಿದೆ.

ಸೀಲ್‍ಡೌನ್ ಮಾಡಿದ್ದ ಮನೆಯಲ್ಲಿ ಮಕ್ಕಳು ಮತ್ತು ವೃದ್ಧರು ವಾಸಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಸದ್ಯ ಅವರು ನಿಟ್ಟುಸಿರುಬಿಟ್ಟಿದ್ದಾರೆ. ಅಧಿಕಾರಿಗಳ ಯಡವಟ್ಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು, ಮನೆಯ ಬಾಗಿಲಿಗೆ ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ತಕ್ಷಣ ತೆರವು ಮಾಡಲಾಗಿದೆ. ಎಲ್ಲಾ ವ್ಯಕ್ತಿಗಳನ್ನು ಗೌರವದಿಂದ ಕಾಣಲು ನಾವು ಬದ್ಧರಾಗಿದ್ದು, ಸೋಂಕಿತರನ್ನು ರಕ್ಷಿಸುವುದು ಹಾಗೂ ಸೋಂಕು ಇಲ್ಲದ ಸಾರ್ವಜನರ ಸುರಕ್ಷಿತರಾಗಿದ್ದಾರೆ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಉದ್ದೇಶವಾಗಿತ್ತು ಎಂದಿದ್ದಾರೆ.ನಿರ್ಲಕ್ಷ್ಯ ವಹಿಸಿ ಮನೆ ಸೀಲ್‍ಡೌನ್ ಮಾಡಿದ್ದ ಅಧಿಕಾರಿಗಳಿಗೆ ಕಾರಣ ಕೇಳಿ ಬಿಬಿಎಂಪಿ ಆಯುಕ್ತರು ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ಖುದ್ದು ಹಾಜರಾಗಿ ಸಮಜಾಯಿಷಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಅಧಿಕಾರಿ ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Laxmi News 24×7