ಬೆಂಗಳೂರು: ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ. ಅಚ್ಛೇ ದಿನ್ ಯಾವತ್ತೂ ಬರುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ತಮಿಳುನಾಡಿನ ಥಳಿ, ಹೊಸೂರು ಹಾಗೂ ವೇಪನಪಲ್ಲಿ ವಿಧಾನಸಭೆ ಕ್ಷೇತ್ರಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡಿನ ಜನತೆ ಈವರೆಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರಿಗೆ ನಮೋ ನಮಃ ಎಂದು ತಿಳಿಸಿದರು.
ಎಐಎಡಿಎಂಕೆ ಹೆಗಲ ಮೇಲೆ ಕುಳಿತು ಬಿಜೆಪಿ ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ಯಾವುದೇ ಕಾರ್ಯಕ್ರಮ, ಸಿದ್ಧಾಂತ ಇಲ್ಲ. ದೇವರ ಹೆಸರಲ್ಲಿ ಜನರ ಭಾವನೆ ಕೆರಳಿಸಿ ಅವರು ಮತ ಕೇಳುತ್ತಾರೆ. ನಾನೂ ರಾಮನ ಭಕ್ತನೇ. ನನ್ನ ಹೆಸರಲ್ಲೂ ರಾಮ ಇದ್ದಾನೆ ಎಂದು ಹೇಳಿದರು.
ಕರುಣಾನಿಧಿ ಮತ್ತು ಕಾಮರಾಜರ ಆಡಳಿತವನ್ನು ನೀವು ನೋಡಿದ್ದೀರಿ. ಬಿಜೆಪಿಯ ದುರಾಡಳಿತದ ಫಲವಾಗಿ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಧ್ಯಮ ವರ್ಗದವರು ಜೀವನ ನಡೆಸಲು ಆಗುತ್ತಿಲ್ಲ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯಿಂದ ಜನ ತತ್ತರಗೊಂಡಿದ್ದಾರೆ ಎಂದು ದೂರಿದರು.
ಸಿಪಿಐ ಆಭ್ಯರ್ಥಿಗೆ ಮತ ಕೊಟ್ಟರೆ ಬಿಜೆಪಿಯ ದುರಾಡಳಿತದ ವಿರುದ್ಧ ಮತ ಕೊಟ್ಟಂತೆ. ಸ್ಟಾಲಿನ್ ಸಿಎಂ ಆಗಬೇಕು ಎಂದಾರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜನತೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಸಹ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.