ಹೊಸದಿಲ್ಲಿ/ ಮುಂಬಯಿ : ಬೆಳಗಾವಿ ವಿಚಾರಕ್ಕೆ ಕೈಹಾಕಿದ ಶಿವಸೇನೆ ಬಾಲ ಸುಟ್ಟುಕೊಂಡಿದೆ. “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ’ ಎನ್ನುವ ಮೂಲಕ ಉದ್ಧವ್ ಠಾಕ್ರೆಯ “ಮಹಾಉದ್ಧಟತನ’ದ ಕನಸಿಗೆ ಕೇಂದ್ರ ಸರಕಾರ ತಣ್ಣೀರು ಎರಚಿದೆ.
ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಶಿವಸೇನೆ “ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು’ ಎಂದಿತ್ತು. ಲೋಕಸಭೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, “ಕಾಲ ಕಾಲಕ್ಕೆ ಕೆಲವರು ಮತ್ತು ಸಂಘಟನೆಗಳು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಬೇಡಿಕೆ ಮಂಡಿಸಿವೆ. ಆದರೆ ಸರಕಾರ ಅಂಥ ಯಾವುದೇ ಪ್ರಸ್ತಾವವನ್ನು ಪರಿಗಣಿಸಿಲ್ಲ’ ಎಂದು ಲಿಖೀತ ಉತ್ತರ ನೀಡಿದ್ದಾರೆ.
ಶಿವಸೇನೆ ಕನಸು ಠುಸ್
“ಸಾಮ್ನಾ’ದಲ್ಲಿ ಶಿವಸೇನೆ ಇಲ್ಲಸಲ್ಲದ ಆರೋಪಗಳನ್ನೂ ಮಾಡಿದೆ. “ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ಹಲ್ಲೆ ಎಸಗಿವೆ’ ಎಂದು ಆರೋಪಿಸಿದೆ. “ಅಂಗಡಿಗಳ ಮರಾಠಿ ಫಲಕಗಳನ್ನು ಕಿತ್ತೆಸೆಯಲಾಗಿದೆ. ಈ ಪ್ರಕರಣಗಳಲ್ಲಿ ಕರ್ನಾಟಕದ ಪೊಲೀಸರ ಕೈವಾಡವೂ ಇದೆ. ಇಂಥ ಕಿಡಿಗೇಡಿ ಕೃತ್ಯಗಳನ್ನು ಅಲ್ಲಿನ ಬಿಜೆಪಿ ಸರಕಾರ ಪೋಷಿಸುತ್ತಿದೆ’ ಎಂದೂ ಆರೋಪಿಸಿದೆ.
ಬಿಜೆಪಿ ವಿರುದ್ಧ ಸಂಚು!
ಬೆಳಗಾವಿ ಕುರಿತ ಶಿವಸೇನೆಯ ಉದ್ಧಟತನದ ಹಿಂದಿನ ಉದ್ದೇಶ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದು ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ “ಬೆಳಗಾವಿಯಲ್ಲಿ ಮರಾಠಿಗರಿಗೆ ಆಗುತ್ತಿರುವ ದೌರ್ಜನ್ಯದ ಕುರಿತು ಮಹಾರಾಷ್ಟ್ರದ ಬಿಜೆಪಿ ಧುರೀಣ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಸರಕಾರ ಮತ್ತು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಬೇಕು’ ಎಂದು ಶಿವಸೇನೆ ಹೇಳಿಕೊಂಡಿದೆ.
Laxmi News 24×7