ಬೆಂಗಳೂರು, ಮಾರ್ಚ್ 12: ಬೆಳಗಾವಿ ಸಾಹುಕಾರ್ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಖಡಕ್ ಅಧಿಕಾರಿಗಳನ್ನು ಹೊಂದಿರುವ ತಂಡ ರಚನೆಯಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರ ಮಾರ್ಗದರ್ಶನದಲ್ಲಿ ಸಿಡಿ ಪ್ರಕರಣದ ತನಿಖೆ ನಡೆಸಲಿದ್ದಾರೆ. ಇನ್ನೂ ಕೇವಲ ತನಿಖೆ ನಡೆಸಿ ವರದಿ ಸಲ್ಲಿಸುವ ವಿಚಾರವಾಗಿ ಈ ತಂಡವನ್ನು ರಚನೆ ಮಾಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಆದೇಶದ ಹಿನ್ನೆಲೆಯಲ್ಲಿ ಇದೀಗ ಪೂರ್ಣ ಪ್ರಮಾಣದ “ವಿಶೇಷ ತನಿಖಾ ತಂಡ” ರಚನೆಯಾಗಿದೆ.
ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಸಿಸಿಬಿ ಎಸಿಬಿ ಧರ್ಮೇಂದ್ರ, ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಾರುತಿ ಈ ತಂಡದಲ್ಲಿ ಇದ್ದಾರೆ. ಇನ್ನು ಸದ್ಯದ ಮಟ್ಟಿಗೆ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಷ್ಟೇ ಈ ವಿಶೇಷ ತನಿಖಾ ತಂಡ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ.
ಈಗಿರುವ ಎಸ್ಐಟಿ ಅಧಿಕಾರವನ್ನ ಪರಿಗಣಿಸಿ ಹೇಳುವುದಾದರೆ ಯಾರನ್ನು ಬೇಕಾದರೂ ಪ್ರಕರಣ ಸಂಬಂಧ ವಿಚಾರಣೆ ನಡೆಸಬಹುದು. ಅದರೆ, ಬಂಧನ ಮಾಡುವ ಹಾಗಿಲ್ಲ. ಹೀಗಾಗಿ ಎಫ್‌ಐಆರ್ ಇಲ್ಲದೇ ವಿಶೇಷ ತನಿಖಾ ತಂಡ ನಡೆಸುವ ತನಿಖೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.
Laxmi News 24×7