ನವದೆಹಲಿ: ನನ್ನ ಪತಿ ಕೊರೊನಾ ಸೋಂಕಿತರಿಗಾಗಿ ಮೂರು ತಿಂಗಳು ರಜೆ ಪಡೆಯದೇ ಕೆಲಸ ಮಾಡಿದ್ದರಿಂದ ಅವರಿಗೂ ಸೋಂಕು ತಗುಲಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪತಿ ನಿಧನರಾದರು. ಆದರೆ ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮೃತ ವೈದ್ಯನ ಪತ್ನಿ ಡಾ.ಹೀನಾ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಖಾಸಗಿ ಪತ್ರಿಕೆ ಜೊತೆ ಮಾತನಾಡಿರುವ ಹೀನಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪತಿ ಡಾ.ಜಾವೇದ್ ಅಲಿ ಮಾರ್ಚ್ ನಿಂದ ಜೂನ್ ವರೆಗೆ ನಿರಂತರವಾಗಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿದ್ರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು. ಡಾ. ಅಲಿ ದೆಹಲಿ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಶನ್ ನ ವೈದ್ಯರಾಗಿದ್ದರು, ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾ ಹೀನಾ ಕಣ್ಣೀರು ಹಾಕಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಎನ್‍ಎಚ್‍ಓ ಸದಸ್ಯ ಡಾ.ಧೀರಜ್, ಜೂನ್ 24ರಂದು ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿತ್ತು. ಜೂನ್ 26ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಲೋಕನಾಯಕ್ ಮತ್ತು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಏಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಾ.ಅಲಿ ನಿಧನರಾದ್ರು ಎಂದು ಹೇಳಿದರು.
ಡಾ. ಅಲಿ ಪತ್ನಿ ಹೀನಾ ಅವರಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ದೊರೆತಿಲ್ಲ. ರೋಗಿಗಳ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಆದ್ರೆ ನಮ್ಮನ್ನು ರಕ್ಷಣೆ ಮಾಡೋರು ಯಾರು ಎಂದು ಹೀನಾ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರ್ಥಿಕ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.