ಬೆಂಗಳೂರು: ಕೊರೊನಾ ಎಂಬ ಚೀನಿ ವೈರಸ್ ರಾಜ್ಯಕ್ಕೆ ಕಾಲಿಟ್ಟ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಕಾಲೆಳೆಯುತ್ತಲೇ ಇವೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಸಿದ್ದು ಮಾಡಿದ ಸರಣಿ ಟ್ವೀಟ್:
ಟ್ವೀಟ್ 1: ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಕೊರೊನಾ ಆರೈಕೆ ಕೇಂದ್ರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದರೆ ಇದರಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಇಂಥದ್ದೊಂದು ವ್ಯವಸ್ಥೆ ನಿರ್ಮಾಣ ಮಾಡುವಂತೆ ಮಾರ್ಚ್ ತಿಂಗಳಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲೇ ನಾವು ಸರ್ಕಾರಕ್ಕೆ ಸಲಹೆ ನೀಡಿದ್ದೆವು.
ಟ್ವೀಟ್ 2: ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸಿದ್ಧವಾಗುತ್ತಿರುವ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ 1,800 ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹಾಗೆಯೇ ಹಾಸಿಗೆ, ಮಂಚ ಖರೀದಿ ಪ್ರಕ್ರಿಯೆಯಲ್ಲೂ ಸಾಕಷ್ಟು ಗೊಂದಲವಿದೆ. ಇದರಿಂದ ಇನ್ನಷ್ಟು ವಿಳಂಬವಾಗಬಹುದು.
ಟ್ವೀಟ್ 3: ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಅಧಿವೇಶನ ಕರೆದು ಚರ್ಚಿಸಿ ಕೊರೊನಾ ನಿಯಂತ್ರಣಕ್ಕೆ ಒಟ್ಟಾಗಿ ಶ್ರಮಿಸೋಣ ಎಂದರೆ ಅದನ್ನೂ ಮಾಡುತ್ತಿಲ್ಲ. ಸರ್ಕಾರದ ಈ ಧೋರಣೆಯಿಂದ ರಾಜ್ಯದ ಜನ ಕಷ್ಟ ಅನುಭವಿಸುವಂತಾಗಿದೆ.
ಟ್ವೀಟ್ 4: ಕೊರೊನಾ ಆರಂಭವಾದಾಗಿಂದ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಕಣ್ಣೆದುರೇ ಭ್ರಷ್ಟಾಚಾರ ನಡೆದರೂ ಪ್ರತಿಪಕ್ಷವಾಗಿ ಸುಮ್ಮನೆ ಕೂರಬೇಕೇ? ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ಕೆಟ್ಟ ರಾಜಕಾರಣವಾದರೆ, ಒಳ್ಳೆ ರಾಜಕಾರಣ ಯಾವುದು ಅಂತ ಅವರೇ ಹೇಳಲಿ ಎಂದು ಬರೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.