ಬೆಂಗಳೂರು,ಮಾ.6- ಮಹದಾಯಿ, ಮೇಕೆದಾಟು ಯೋಜನೆ ಆರಂಭಕ್ಕೆ ಒತ್ತಾಯಿಸಿ ಹಾಗೂ ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಕಾಮಗಾರಿ ಕೈಗೆತ್ತಿಕೊಂಡರೂ ಮೌನ ವಹಿಸಿರುವ ಸರ್ಕಾರದ ಕ್ರಮ ವಿರೋಸಿ ಕನ್ನಡ ಒಕ್ಕೂಟ ಸಂಸದರನ್ನು ಹರಾಜು ಹಾಕುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಅನ್ಯಾಯದ ವಿರುದ್ದ ಲೋಕಸಭಾ ಸದಸ್ಯರು ಧ್ವನಿ ಎತ್ತದಿರುವುದು ತೀವ್ರ ಖಂಡನೀಯ ಎಂದರು.
ತಮಿಳುನಾಡಿನಲ್ಲಿ ಕಾವೇರಿ ನದಿಜೋಡಣೆಗೆ ಸಂಬಂಸಿದಂತೆ 118 ಕಿ.ಮೀ ಉದ್ದದ ಕಾಲುವೆ ತೋಡಲು ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಮೃದು ಧೋರಣೆ ಅನುಸರಿಸುತ್ತಿದೆ. ಮಹದಾಯಿ ಯೋಜನೆ ಪ್ರಾರಂಭವಾಗಿಲ್ಲ.ಮೇಕೆದಾಟು ಯೋಜನೆ ಪ್ರಾರಂಭವಾಗಿಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಜನಹಿತವನ್ನು ಮರೆತು ವರ್ತಿಸುತ್ತಿದೆ. ನಮ್ಮ ಸಂಸದರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ನೀರಾವರಿ ಯೋಜನೆಗಳ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಆದರೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
13ರಂದು ಬೆಂಗಳೂರಿನಿಂದ ಕನ್ನಂಬಾಡಿಯವರೆಗೆ ಯಾತ್ರೆ ಹಮ್ಮಿಕೊಂಡು ಸಮ್ಮೇಳನ ನಡೆಸುತ್ತೇವೆ. ಮಹದಾಯಿ, ಕಾವೇರಿ ಯೋಜನೆ ಸಂಬಂಧ ಚರ್ಚಿಸಿ ಕರ್ನಾಟಕ ಬಂದ್ ಮಾಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.