ಉಡುಪಿ: ಮಣಿಪಾಲ ಕೆಎಂಸಿಯ ಹದಿನೆಂಟು ವೈದ್ಯರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೇ 20ಕ್ಕಿಂತಲೂ ಹೆಚ್ಚು ನರ್ಸ್, ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಹೀಗಾಗಿ ಒಂದು ವಾರ ಒಪಿಡಿ ಬಂದ್ ಮಾಡಲಾಗಿದೆ.
ಕೊರೊನಾ ವಾರಿಯರ್‌ಗಳಿಗೆ ಒಂದು ವಾರ ಒಪಿಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಒಂದು ವಾರಗಳ ಕಾಲ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಿದೆ.
ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಕೆಎಂಸಿಗೆ ಆಗಮಿಸುವ ಎಲ್ಲ ಒಪಿಡಿ ರೋಗಿಗಳಿಗೆ ಸದ್ಯ ಆಸ್ಪತ್ರೆಗೆ ಬರುವ ಅವಕಾಶ ಇಲ್ಲ. ಎಮರ್ಜೆನ್ಸಿ ಕೇಸ್‍ಗಳನ್ನು ಮಾತ್ರ ಅಟೆಂಡ್ ಮಾಡುತ್ತೇವೆ. ಮಾಹಿತಿ ಇಲ್ಲದೇ ಇವತ್ತು ಬಂದ ಕೆಲ ರೋಗಿಗಳಿಗೆ ಆಸ್ಪತ್ರೆಯ ಹೊರಗೆ ಚಿಕಿತ್ಸೆ ಕೊಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.
ಆಸ್ಪತ್ರೆಗೆ ಬರುವ ರೋಗಿಗಳು, ಅವರ ಉಪಯೋಗಕ್ಕೆ ಕೋವಿಡ್ ಹೆಲ್ಪ್ ಡೆಸ್ಕ್ ತೆರೆದಿದ್ದೇವೆ. ಯಾವುದಾದರೂ ಲಕ್ಷಣಗಳು ಕಂಡು ಬಂದಲ್ಲಿ ಈ ಬಗ್ಗೆ ಸಲಹೆಗಳನ್ನು ಡೆಸ್ಕ್ ನಲ್ಲಿ ಕೊಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ತಿಂಗಳಿಂದ ಮಾನ್ಸೂನ್ ಅಬ್ಬರಿಸುತ್ತಿದೆ. ಸಹಜವಾಗಿ ಮಳೆಗಾಲದಲ್ಲಿ ಶೀತ, ಜ್ವರ, ಕೆಮ್ಮು, ನೆಗಡಿ ಜನರನ್ನು ಬಾಧಿಸುತ್ತದೆ. ಹೀಗಾಗಿ ಕೆಎಂಸಿಯ ಹೊರ ಭಾಗದಲ್ಲಿ ಒಂದು ಫಿವರ್ ಕ್ಲಿನಿಕ್ ಅನ್ನು ತೆರೆಯಲಾಗಿದೆ. ಒಂದು ವಾರಗಳ ಕಾಲ ಆಸ್ಪತ್ರೆಯ ಒಳಗೆ ಇರುವ ರೋಗಿಗಳು ಕೆಎಂಸಿಯ ಸಿಬ್ಬಂದಿ, ವೈದ್ಯರು ಎಲ್ಲರಿಗೂ ಕೊರೊನಾ ಟೆಸ್ಟ್ ನಡೆಯಲಿದೆ.