ವಿಶಾಖಪಟ್ಟಣಂ: ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಇಬ್ಬರು ಆರೋಪಿಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್ಪೋಸ್ಟ್ನಲ್ಲಿ ಪೊಲೀಸರು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿಗಳು ಅಂತಾರಾಜ್ಯ ದಂಧೆಕೋರರು ಎಂಬುದಾಗಿ ತಿಳಿದುಬಂದಿದೆ. ಅವರಿಬ್ಬರು ಛತ್ತೀಸ್ಗಢದ ರಾಯ್ಪುರದಿಂದ ಆಂಧ್ರದ ವಿಶಾಖಪಟ್ಟಣಂ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸುಂಕಿ ಔಟ್ಪೋಸ್ಟ್ನಲ್ಲಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ 500 ರೂ. ನೋಟಿನ ಕಂತೆಗಳ ಒಟ್ಟು 7.9 ಕೋಟಿ ರೂ. ನಕಲಿ ಹಣ ಪತ್ತೆಯಾಗಿದೆ.
ಇನ್ನು ಆಂಧ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಹ ಘೋಷಣೆಯಾಗಿದ್ದು, ಮಾರ್ಚ್ 10ರಂದು ಮತದಾನ ನಡೆಯಲಿದೆ. ಇದರ ಬೆನ್ನಲ್ಲೇ ನಕಲಿ ಹಣ ಪತ್ತೆಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 489ಎ, 489ಬಿ, 489ಸಿ ಮತ್ತು 120ಬಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಆರಂಭವಾಗಿದೆ. ಇದೇ ವೇಳೆ ಆಂಧ್ರ, ಛತ್ತೀಸ್ಗಢ ಮತ್ತು ಒಡಿಶಾ ಮೂರು ರಾಜ್ಯಗಳ ಪೊಲೀಸರು ತಂಡವೊಂದನ್ನು ರಚಿಸಿ ಗ್ಯಾಂಗ್ನ ಉಳಿದ ಸದಸ್ಯರಿಗಾಗಿ ಬಲೆ ಬೀಸಿದೆ.
Laxmi News 24×7