ಬಸವಕಲ್ಯಾಣ: ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪ್ರತ್ಯೇಕ ಚಟುವಟಿಕೆಗೆ ವರಿಷ್ಠರು ಕಡಿವಾಣ ಹಾಕಿದ್ದು ಏನೇ ಕಾರ್ಯಕ್ರಮ ಆಯೋಜಿಸಿದರೂ ಪಕ್ಷದ ಬ್ಯಾನರ್ ಅಡಿಯಲ್ಲಿ ಒಗ್ಗಟ್ಟಾಗಿಯೇ ಹಮ್ಮಿಕೊಳ್ಳಿ ಎಂದಿದ್ದರಿಂದ ಇನ್ನುಮುಂದೆ ಶಕ್ತಿ ಪ್ರದರ್ಶನಕ್ಕೆ ಯಾರಿಗೂ ಅವಕಾಶ ಇಲ್ಲದಂತಾಗಿದೆ.
ಬೆಂಗಳೂರಿನಲ್ಲಿ ಈಚೆಗೆ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಈ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಪ್ರಭು ಚವಾಣ್ ಅವರು ಇನ್ನು ಮುಂದೆ ಕಾರ್ಯಕರ್ತರು ಅವರಿವರ ಪರ ಘೋಷಣೆ ಕೂಗದೆ ಪಕ್ಷಕ್ಕೆ ಜೈ ಎನ್ನಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣ ಅಲ್ಲಿಂದ ನೇರವಾಗಿ ಕ್ಷೇತ್ರಕ್ಕೆ ಬಂದ ಎಲ್ಲ ಆಕಾಂಕ್ಷಿಗಳು ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಹೋಬಳಿವಾರು ವಿಜಯ ಸಂಕಲ್ಪಯಾತ್ರೆ ಹಮ್ಮಿಕೊಂಡು ನಾವು ಒಗ್ಗಟ್ಟಾಗಿಯೇ ಇದ್ದೇವೆ ಎಂಬ ಸಂದೇಶವನ್ನು ಮತದಾರರಿಗೆ ಮುಟ್ಟಿಸಿದ್ದಾರೆ.
ಹಾಗೆ ನೋಡಿದರೆ, ಶಾಸಕ ಬಿ.ನಾರಾಯಣರಾವ್ ಅವರ ನಿಧನದ ನಂತರ ಈ ಕ್ಷೇತ್ರ ತೆರವಾಗಿ ಐದು ತಿಂಗಳು ಆಗುತ್ತಿದೆ. ಈ ಅವಧಿಯಲ್ಲಿ ಕೆಲವರು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹಾಗೂ ಪಕ್ಷದ ವರಿಷ್ಠರು ಇಲ್ಲಿಗೆ ಬಂದಾಗ ಶಕ್ತಿ ಪ್ರದರ್ಶನ ನಡೆಸಿ ನಾವೂ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳು ಎಂಬುದನ್ನು ತೋರ್ಪಡಿಸಿದ್ದಾರೆ.
ಆಕಾಂಕ್ಷಿಗಳಾದ ಶರಣು ಸಲಗರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ ಮಾತ್ರ ಇಲ್ಲಿಗೆ ಯಾರೇ ಬಂದರೂ ಅಪಾರ ಬೆಂಬಲಿಗರ ಜತೆ ಭರ್ಜರಿಯಾಗಿ ಸ್ವಾಗತಿಸಿ ಶಕ್ತಿ ಪ್ರದರ್ಶಿಸಿದ್ದಾರೆ. ಈ ಐದು ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್, ಉಪಾಧ್ಯಕ್ಷ ವಿಜಯೇಂದ್ರ, ಸಚಿವರಾದ ವಿ.ಸೋಮಣ್ಣ, ಪ್ರಭು ಬಿ.ಚವಾಣ್ ನಾನಾ ಕಾರಣಗಳಿಂದ ಇಲ್ಲಿಗೆ ಬಂದಿದ್ದರು. ಆಗ ಈ ಇಬ್ಬರೂ ಎಲ್ಲರಗಿಂತ ಭಿನ್ನವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಎಲ್ಲರ ಗಮನ ಸೆಳೆದಿದ್ದರು.
ಈಚೆಗೆ ಈ ಇಬ್ಬರ ಬೆಂಬಲಿಗರು ಕೂಡ ಪ್ರತ್ಯೇಕವಾಗಿ ಮಠ, ಮಂದಿರಗಳಲ್ಲಿ ಪೂಜೆ, ಅನ್ನ ದಾಸೋಹ, ತೆಂಗು ಅರ್ಪಣೆ ನಡೆಸುವ ಮೂಲಕ ಟಿಕೆಟ್ ಸಿಗಲೆಂದು ಪ್ರಾರ್ಥಿಸಿದ್ದಾರೆ. ಹಾರಕೂಡ ಹಿರೇಮಠಕ್ಕೆ, ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡರು. ಇನ್ನೊಬ್ಬ ಆಕಾಂಕ್ಷಿ ಪ್ರದೀಪ ವಾತಡೆ ಅವರ ಬೆಂಬಲಿಗರೂ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.
ಇಬ್ಬರು ಮಹಿಳೆಯರು ಒಳಗೊಂಡು ಆಕಾಂಕ್ಷಿಗಳ ಸಂಖ್ಯೆ 18 ಕ್ಕೆ ಏರಿದೆ. ಇವರೆಲ್ಲರೂ ಏನಾದರೊಂದು ಕಾರಣದಿಂದ ಪಕ್ಷದ ವರಿಷ್ಠರ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದ್ದಾರೆ.
Laxmi News 24×7