ತಿರುಪತಿ: ಪೈಲಟ್ ಒಬ್ಬರ ಸಮಯ ಪ್ರಜ್ಞೆಯಿಂದ 75 ಜನ ಪ್ರಯಾಣಿಕರ ಜೀವ ಉಳಿದಿರುವ ಘಟನೆ ತಿರುಪತಿಯಲ್ಲಿ ಭಾನುವಾರ ನಡದಿದೆ.
ಹೈದರಾಬಾದ್-ತಿರುಪತಿ-ಬೆಂಗಳೂರು ಮಧ್ಯೆ ಸಂಚಿಸಲಿರುವ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನವೊಂದು ಭಾರಿ ಅಪಘಾತಕ್ಕೆ ಈಡಾಗುವ ಸಂಭವವಿತ್ತು.
ಈ ಮಧ್ಯೆಯೇ ಪೈಲಟ್ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ತಿರುಪತಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಂದು ಇಳಿಸಲಾಗಿದೆ.
ನಿನ್ನೆ ಬೆಳಗ್ಗೆ ಈ ವಿಮಾನವು ಪ್ರಯಾಣಿಕರನ್ನು ಇಳಿಸುವ ಸಂಬಂಧ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು.
ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿರುವಾಗಲೇ ರನ್‌ವೇದಲ್ಲಿ ಅಗ್ನಿಶಾಮಕದಳದ ವಾಹನ ಕಂಡಿದೆ. ಅಪಘಾತಕ್ಕೀಡಾಗಿದ್ದ ವಾಹನವು ರನ್‌ವೇದಲ್ಲಿ ನಿಂತಿತ್ತು.
ಸ್ವಲ್ಪ ತಪ್ಪಿದ್ದರೂ ವಿಮಾನ ಅಲ್ಲಿಯೇ ಸ್ಫೋಟಗೊಳ್ಳುವ ಸಾಧ್ಯತೆ ಇತ್ತು. ಕೂಡಲೇ ಸಮಯಪ್ರಜ್ಞೆ ತೋರಿದ ಪೈಲಟ್ ವಿಮಾನವನ್ನು ಇಳಿಸುವ ಬದಲು ಟೇಕ್‌ಆಫ್ ಮಾಡಿ ಬೆಂಗಳೂರಿನ ಕಡೆಗೆ ಪ್ರಯಾಣಿಸಿದರು. ಇದರಿಂದಾಗಿ ಎಲ್ಲಾ ಪ್ರಯಾಣಿಕರು ಬಚಾವಾಗಿದ್ದಾರೆ.