ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್, ಹೊರ ರಾಜ್ಯ, ದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಬಹುತೇಕ ನಟರಿಗೆ ಅಭಿಮಾನಿ ಸಂಘಗಳು ಇರುತ್ತವೆ, ಇದು ಬಹುತೇಕ ಸಹಜ ಸಹ. ಬಹುತೇಕ ನಟರಿಗೆ ಪುರುಷ ಅಭಿಮಾನಿ ಸಂಘಗಳು ಮಾತ್ರವೇ ಇರುತ್ತವೆ. ಆದರೆ ಸುದೀಪ್ ಅವರಿಗೆ ಮಹಿಳಾ ಅಭಿಮಾನಿ ಸಂಘವೂ ಇದೆ. ಈ ರೀತಿ ಮಹಿಳಾ ಅಭಿಮಾನಿ ಸಂಘ ಹೊಂದಿರುವ ವಿರಳ ನಟರಲ್ಲಿ ಸುದೀಪ್ ಸಹ ಒಬ್ಬರು.
5000 ಮಹಿಳಾ ಸದಸ್ಯರೇ ಹೊಂದಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮಹಿಳಾ ಮಹಾ ಸೇನೆಯನ್ನು ಮಹಿಳೆಯರೇ ಸೇರಿ ಕಟ್ಟಿದ್ದಾರೆ. ಈ ಸೇನೆಗೆ ‘ಮಹಾಸೇವನ ಬಾದ್‌ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ’ ಎಂದು ಹೆಸರಿಡಲಾಗಿದೆ. ಈ ರೀತಿ 5000 ಮಹಿಳೆಯರೇ ಇರುವ ಅಭಿಮಾನಿ ಸಂಘ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಹಿಳೆಯರು ಸೇರಿ ಈ ಸಂಘ ಕಟ್ಟಿದ್ದು, ಈ ಮಹಿಳಾ ಅಭಿಮಾನಿ ಸಂಘವು ಕಿಚ್ಚ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಕೆಲಸ ಮಾಡಲಿದೆ. ತಮ್ಮ ಸಂಘದ ಮುಖ್ಯ ಮಹಿಳೆಯರು ವಿಡಿಯೋ ಒಂದನ್ನು ಸಹ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಸುದೀಪ್, ‘ಇದು ಬಹಳ ಮಧುರವಾದುದ್ದು, ಎಲ್ಲರಿಗೂ ಧನ್ಯವಾದ’ ಎಂದು ಕೈಮುಗಿದಿದ್ದಾರೆ.
ನಟ ಸುದೀಪ್ ಅವರ ಬೆಂಬಲದೊಂದಿಗೆ ಅಭಿಮಾನಿಗಳು ನಡೆಸುತ್ತಿರುವ ‘ಸುದೀಪ ಚಾರಿಟೇಬಲ್ ಟ್ರಸ್ಟ್’ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಬಗ್ಗೆ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ, ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳಲಾಗುತ್ತದೆ.
ನಟ ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಕೆಲವು ದಿನಗಳ ಹಿಂದಷ್ಟೆ ಈ ಸಡಗರವನ್ನು ದುಬೈ ನ ಬುರ್ಜ್ ಖಲೀಫಾ ಐಶಾರಾಮಿ ಹೋಟೆಲ್‌ನಲ್ಲಿ ಆಚರಿಸಲಾಯಿತು. ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಬಿಡುಗಡೆಗೆ ತಯಾರಾಗಿದೆ. ಬಿಗ್‌ಬಾಸ್ ಸೀಸನ್ 8 ಸಹ ಶೀಘ್ರದಲ್ಲಿಯೇ ಆರಂಭವಾಗಲಿದೆ.
Laxmi News 24×7