ಉಡುಪಿ: ಆಗಸ್ಟ್ ಮೂರು ಅಥವಾ ನಾಲ್ಕನೇ ತಾರೀಖಿನಂದು ರಾಮಮಂದಿರದ ಶಿಲಾನ್ಯಾಸ ನೆರವೇರುವ ಸಾಧ್ಯತೆಗಳಿವೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ಟ್ರಸ್ಟಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ಇವತ್ತು ನಡೆದ ಸಭೆಯಲ್ಲಿ ಮಂದಿರ ನಿರ್ಮಾಣ ಕ್ಕೆ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ಮತ್ತು ಮಂದಿರ ನಿರ್ಮಾಣ ಮೊತ್ತದ ಕ್ರೋಢೀಕರಣದ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳಿಗೆ ಪೇಜಾವರ ಶ್ರೀಗಳು ಮಾಹಿತಿ ಕೊಟ್ಟರು.
ಎಲ್ ಆಂಡ್ ಟಿ ಕಂಪನಿ ಮೂಲಕ ನಿರ್ಮಾಣ ಕಾರ್ಯ ಆಗಲಿದೆ. ಮಂದಿರ ನಿರ್ಮಿಸುವ ಜಮೀನಿನ 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಅಧ್ಯಯನ ನಡೆಸಲಾಗುವುದು. 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಿದ್ದೇವೆ. ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದೇವೆ. ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣ ಆಗಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಎಪ್ಪತ್ತು ಎಕರೆ ಸುತ್ತಲ ಪರಿಸರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರುಪಾಯಿ ಅವಶ್ಯಕತೆ ಇದೆ. ಬೇರೆ ಬೇರ ಕಂಪನಿಗಳ ಸಿಎಸ್ ಆರ್ ಫಂಡ್, ರಾಮಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಹಣ ಸಂಗ್ರಹ, ಪ್ರತಿ ವ್ಯಕ್ತಿಯ ಮೂಲಕ ಹತ್ತು ರೂಪಾಯಿ, ಮನೆಯಿಂದ ನೂರು ರುಪಾಯಿ ಸಂಗ್ರಹಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಪೇಜಾವರಶ್ರೀ ಹೇಳಿದ್ದಾರೆ.