Breaking News

ಕೋವಿಡ್‌ ಸಂದರ್ಭದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ: ಎಚ್‌.ಕೆ. ಪಾಟೀಲ

Spread the love

ಬೆಂಗಳೂರು: ಕೋವಿಡ್‌-19 ಸಂದರ್ಭದಲ್ಲಿ ‘ನಂಬರ್‌ 1 ಭ್ರಷ್ಟ ರಾಜ್ಯ’ ಎಂಬ ಅಪಕೀರ್ತಿಗೆ ಕರ್ನಾಟಕ ಒಳಗಾಗಿದೆ. ಶೇ 63 ರಷ್ಟು ಜನ ಸರ್ಕಾರಿ ಸೇವೆಗೆ ಲಂಚ ನೀಡಬೇಕಾಗಿ ಬಂತು ಎಂದು ಸಮೀಕ್ಷೆಯೊಂದರಿಂದ ಬಯಲಿಗೆ ಬಂದಿದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌.ಕೆ.ಪಾಟೀಲ ವಿಧಾನಸಭೆಯಲ್ಲಿ ಹೇಳಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪಾಟೀಲ, ಒಂದು ವರ್ಷದ ಹಿಂದೆ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ ಎನ್ನುವವರ ಸಂಖ್ಯೆ ಶೇ 43 ಇತ್ತು. ಕೇವಲ ಒಂದು ವರ್ಷದಲ್ಲಿ ಶೇ 20 ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಸಂಸ್ಥೆ ಸಮೀಕ್ಷೆ ನಡೆಸಿದೆ. ಈ ಬಗ್ಗೆ ಒಂದು ತನಿಖೆ ಆಗಬೇಕು. ಸರ್ಕಾರ ಮೂಕ ಪ್ರೇಕ್ಷಕರಂತೆ ಇರುವುದು ಸರಿಯಲ್ಲ. ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ಆಗಿದೆ. ಲೋಕಾಯುಕ್ತದ ಮೂಲಕ ತನಿಖೆ ಮಾಡಿಸಿ ಎಂದು ಹೇಳಿದರು.

₹136 ಕೋಟಿ ಅವ್ಯವಹಾರ

ಕೋವಿಡ್‌ ಸಂದರ್ಭದಲ್ಲಿ ₹136 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭಾಧ್ಯಕ್ಷರಿಗೆ ವರದಿ ನೀಡಿದೆ. ಆದರೆ, ಅದನ್ನು ಸಚಿವಾಲಯ ಸದನದಲ್ಲಿ ಮಂಡಿಸಿಲ್ಲ. ಭ್ರಷ್ಟಾಚಾರವನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಮತ್ತು ನಮ್ಮ ಧ್ವನಿ ಹತ್ತಿಕ್ಕುವ ಕೆಲಸ ಆಗಬಾರದು ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಲೆಕ್ಕ ಪತ್ರ ಸಮಿತಿ ವರದಿ ತಡೆ ಹಿಡಿಯುವ ಕೆಲಸ ಆಗಬಾರದು. ಸಾರ್ವಜನಿಕರಿಗೆ ಸತ್ಯ ತಿಳಿಯಬೇಕು. ಆದ್ದರಿಂದ ತಕ್ಷಣವೇ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು.

ಲಿಖಿತ ಅಭಿಪ್ರಾಯ ಮಂಡನೆಗೆ ಅವಕಾಶ

ಸದನದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಸಿಗುವುದಿಲ್ಲ. ಸಿಕ್ಕರೂ ಹೇಳಬೇಕಾದದ್ದು ಹೇಳುವಷ್ಟು ಅವಕಾಶ ನೀಡದ ಕಾರಣ, ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ದಾಖಲಿಸಿ ಸದನದಲ್ಲಿ ಮಂಡಿಸಲು ಅವಕಾಶ ನೀಡಬೇಕು. ಇದು ಹೊಸ ಪರಂಪರೆಯಾದರೂ, ಇದರ ಅಗತ್ಯವಿದೆ ಎಂದು ಪಾಟೀಲ ಪ್ರತಿಪಾದಿಸಿದರು.

₹136 ಕೋಟಿ ಬೊಕ್ಕಸಕ್ಕೆ ನಷ್ಟ

ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ 49 ಕಂಪನಿಗಳಿಂದ ಖರೀದಿಸಿದ ವೈದ್ಯಕೀಯ ಉಪಕರಣಗಳಿಗೆ ಹೆಚ್ಚುವರಿ ಹಣ ಪಾವತಿಸಿರುವ ಪಟ್ಟಿಯನ್ನು ಎಚ್‌.ಕೆ.ಪಾಟೀಲ ಸಭಾಧ್ಯಕ್ಷರಿಗೆ ಒಪ್ಪಿಸಿದರು. ಈ ಮೂಲಕ ಸುಮಾರು ₹136 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಆರೋಪಿಸಿದರು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ