ಬೆಂಗಳೂರು: ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಉತ್ತರ ಕೊಡಿ ಬಿಜೆಪಿ’ ಅಂತಾ ಸಮರ ಸಾರಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವೆಂಟಿಲೇಟರ್ ಹಗರಣದ ಆರೋಪ ಮಾಡಿದ್ದಾರೆ.
ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂಪಾಯಿಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂಪಾಯಿ ಕೊಟ್ಟಿದೆ. ಬೊಕ್ಕಸಕ್ಕೆ ಆರು ಕೋಟಿಗೂ ಹೆಚ್ಚು ನಷ್ಟವಾಗಿದೆ. ಕೊರೊನಾ ಕರಪ್ಷನ್ ಬಗ್ಗೆ ಸಿಎಂ ಉತ್ತರ ಕೊಡಬೇಕಿದೆ ಅಂತಾ ಒತ್ತಾಯಿಸಿದ್ದಾರೆ. ಒಂದ್ಕಡೆ ವೆಂಟಿಲೇಟರ್ ಸಿಗದೇ ಸೋಂಕಿತರು ಸಾಯುತ್ತಿದ್ದಾರೆ. ಆದರೆ ಬಿಜೆಪಿ ಸಚಿವರು ಪಿಪಿಇ ಕಿಟ್‍ಗಳಿಂದ ಹಿಡಿದು ಪ್ರತಿಯೊಂದರ ಖರೀದಿಯಲ್ಲೂ ಲೂಟಿಗಿಳಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನದು ವೆಂಟಿಲೇಟರ್ ಖರೀದಿ ಹಗರಣ?
* ತಮಿಳುನಾಡು ಸರ್ಕಾರದಿಂದ 4.78 ಲಕ್ಷ ರೂ.ಗೆ ಒಂದರಂತೆ 100 ವೆಂಟಿಲೇಟರ್ ಖರೀದಿ.
* ಕರ್ನಾಟಕ ಸರ್ಕಾರದಿಂದ 18.20 ಲಕ್ಷ ರೂ.ಗೆ ಒಂದರಂತೆ 200 ವೆಂಟಿಲೇಟರ್ ಖರೀದಿ.
* ಪ್ರತಿ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ ನೀಡಿದ ಹೆಚ್ಚುವರಿ ಹಣ 13.42 ಲಕ್ಷ ರೂ.
* 9.65 ಕೋಟಿ ವೆಚ್ಚ ಮಾಡಬೇಕಿದ್ದ ಜಾಗದಲ್ಲಿ 15.86 ಕೋಟಿ ವೆಚ್ಚ ಮಾಡಿದ ಸರ್ಕಾರ.
* ಈ ಅವ್ಯವಹಾರದಲ್ಲಿ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 6.40 ಕೋಟಿ ನಷ್ಟ.