ರಾಮತೀರ್ಥ ನಗರದ ಸರ್ಕಾರಿ ಶಾಲೆಯಲ್ಲಿ ಹಿರಿಯ ನಾಗರಿಕರ ಮತ್ತು ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮ
ಸಂಗಮ ಗೌರವದಿಂದ ವೃದ್ಧರಾಗಿ, ಮಾನ್ಯತೆಯಿಂದ ಜೀವನ ನಡೆಸಿ”
ಹಿರಿಯ ನಾಗರಿಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ
ರಾಮತೀರ್ಥ ನಗರದ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯಕ್ಕೆ ಪ್ರಶಂಸೆ
ಬೆಳಗಾವಿಯ ರಾಮತೀರ್ಥ ನಗರದ ಸರ್ಕಾರಿ ಶಾಲೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೋಶಿಯಲ್ ವಿಂಗ್ ವತಿಯಿಂದ “ಸಂಗಮ ಗೌರವದಿಂದ ವೃದ್ಧರಾಗಿ, ಮಾನ್ಯತೆಯಿಂದ ಜೀವನ ನಡೆಸಿ” ಎಂಬ ಶೀರ್ಷಿಕೆಯಡಿ ಹಿರಿಯ ನಾಗರಿಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಸಂಗೀತ ಬ್ರಹ್ಮಕುಮಾರಿ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ ಮಕ್ಕಳು ಮತ್ತು ಪಾಲಕರ ನಡುವೆ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹಿರಿಯರು ಮತ್ತು ಕಿರಿಯರು ಪರಸ್ಪರರ ಭಾವನೆಗಳನ್ನು ಅರ್ಥೈಸಿಕೊಂಡು, ಗೌರವದಿಂದ ನಡೆದುಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ” ಎಂದು ಮಾರ್ಮಿಕವಾಗಿ ನುಡಿದರು.

ಹಿರಿಯ ನಾಗರಿಕ ಸಂಘದ ಉಪಾಧ್ಯಕ್ಷರಾದ ಎಮ್. ವಿ. ಹಿರೇಮಠ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ, “ಮನೆಗೆ ಅಜ್ಜ-ಅಜ್ಜಿಯರು ಕೇವಲ ವ್ಯಕ್ತಿಗಳಲ್ಲ, ಅವರು ಜ್ಞಾನದ ಆಸ್ತಿ. ಅವರನ್ನು ಪ್ರೀತಿ ಮತ್ತು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ” ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಮೆಳವಂಕಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಪಾಲಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಬ್ರಹ್ಮಕುಮಾರಿ ಸಂಸ್ಥೆಯ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
Laxmi News 24×7