ಚಿಕ್ಕೋಡಿ – ಚಿಕ್ಕೋಡಿ ಪಟ್ಟಣದಲ್ಲಿ ಕೊರೋನಾ ಈವರೆಗೂ ಕಾಣಿಸದಿದ್ದರೂ, ಮುಂದಿನ ದಿನಗಳಲ್ಲಿ ಅಪಾಯ ಬರಬಾರದೆನ್ನುವ ಕಾರಣಕ್ಕೆ ಸ್ವಯಂ ಲಾಕ್ ಡೌನ್ ಘೋಷಿಸಿಕೊಳ್ಳಲಾಗಿದೆ.
ಪಟ್ಟಣದಲ್ಲಿ 8 ದಿನಗಳ ಕಾಲ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಯಂ ಲಾಕ್ ಡೌನ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ತಾವೇ ಸ್ವತಃ 8 ದಿನಗಳ ಕಾಲ ಪಟ್ಟಣದ ಎಲ್ಲ ಜನರಿಗೂ ಹಾಲನ್ನು ಉಚಿತವಾಗಿ ಪೂರೈಸಲು ನಿರ್ಧರಿಸಿದ್ದಾರೆ.
ಪಟ್ಟಣದ ಸುಮಾರು 10 ಸಾವಿರ ಕುಟುಂಬಗಳಿಗೆ 16 ದಿನಗಳವರೆಗೆ ದಿನಬಿಟ್ಟು ದಿನ ಹಾಲಿನ ಪೂರೈಕೆಯಾಗಲಿದೆ. ಅಂದರೆ 8 ದಿನ ಪ್ರತಿ ಕುಟುಂಬಕ್ಕೆ ಹಾಲು ಸಿಗಲಿದೆ.
“ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಗಣೇಶ ಹುಕ್ಕೇರಿ ಮನವಿ ಮಾಡಿದ್ದಾರೆ.