ಮೈಸೂರು: ನಗರದ ಎಂ.ಜಿ. ರಸ್ತೆಯಲ್ಲಿರುವ ರೇಸ್‌ಕೋರ್ಸ್‌ನಲ್ಲಿ ಮಾರಕ ಗ್ಲಾಂಡರ್ಸ್ ಸೋಂಕಿನಿಂದ ಕುದುರೆಯೊಂದು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 17ರಂದು ಎರಡು ವರ್ಷದ ಗಂಡು ಕುದುರೆ ಗ್ಲಾಂಡರ್ಸ್ ಸೋಂಕಿಗೆ ಬಲಿಯಾಗಿದೆ. ಈ ಸೋಂಕು ಮಾರಕವಾಗಿದ್ದು, ಎರಡು ಕಿ.ಮೀ ವ್ಯಾಪ್ತಿಯವರೆಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮೃಗಾಲಯದಲ್ಲಿ ಎಲ್ಲ ಪ್ರಾಣಿಗಳ ಮೇಲೆ ನಿಗಾವಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸೋಂಕು ಮೃಗಾಲಯದಲ್ಲಿರುವ ಜೀಬ್ರಾ ಮತ್ತು ಜಿರಾಫೆಗಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದದಿಂದ, ಅವು ಇರುವ ಸ್ಥಳದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಮೃಗಾಲಯದಲ್ಲಿ 6 ಜೀಬ್ರಾಗಳು ಹಾಗೂ 10ಕ್ಕೂ ಹೆಚ್ಚು ಜಿರಾಫೆಗಳಿವೆ. ಜೀಬ್ರಾ ಹಾಗೂ ಜಿರಾಫೆಗಳಿರುವ ಆವರಣದ ಬಳಿ ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸ್) ಸಿಂಪಡಿಸಲಾಗಿದೆ. ಪ್ರತಿದಿನ 3-4 ಬಾರಿ ಈ ಪ್ರಾಣಿಗಳಿರುವ ಸ್ಥಳದ ಸುತ್ತ, ಕಾಂಪೌಂಡ್, ಪ್ರವೇಶ ದ್ವಾರದ ಮೇಲೂ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಮೃಗಾಲಯದ ಪ್ರಾಣಿಗಳಿಗೆ ಆಹಾರ ಪೂರೈಕೆ ಟೆಂಡರ್ ಪಡೆದಿರುವ ಗುತ್ತಿಗೆದಾರರಿಗೆ ಇಲ್ಲಿಗೆ ಆಹಾರ ಪದಾರ್ಥ ಸರಬರಾಜು ಮಾಡಲು ಪ್ರತ್ಯೇಕ ವಾಹನ ಬಳಸುವಂತೆ ಸೂಚನೆ ನೀಡಲಾಗಿದೆ. ಮೃಗಾಲಯಕ್ಕೆ ಪ್ರವೇಶ ದ್ವಾರದಲ್ಲಿಯೇ ಆಹಾರ ಪದಾರ್ಥ ಹೊತ್ತು ತರುವ ವಾಹನಕ್ಕೂ ಸ್ಯಾನಿಟೈಸ್ ಮಾಡಿದ ನಂತರವಷ್ಟೇ ಮೃಗಾಲಯದ ಒಳಗೆ ಬಿಡಲಾಗುತ್ತಿದೆ.
ಮೃಗಾಲಯದಲ್ಲಿರುವ ವನ್ಯಜೀವಿಗಳನ್ನು ರಕ್ಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಜ್ಞವೈದ್ಯರು, ಪರಿಣಿತರು, ವನ್ಯಜೀವಿ ತಜ್ಞರ ಸಭೆ ನಡೆಸಲಾಗಿದೆ. ಮೈಸೂರು ಸೇರಿದಂತೆ ರಾಜ್ಯದಲ್ಲಿರುವ 9 ಮೃಗಾಲಯಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಮೃಗಾಲಯಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಮಾರ್ಗಸೂಚಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7