Breaking News

ಮೂಕ ಪ್ರಾಣಿಗಳ ಸಾವಿಗೆ ಕಾರಣ ಆದವರ ವಿರುದ್ಧ ಕ್ರಮ ನಿಶ್ಚಿತ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ

Spread the love

ಬೆಳಗಾವಿ : ಮೂಕ ಪ್ರಾಣಿಗಳ ಸಾವಿಗೆ ಯಾರೇ ಕಾರಣವಾದರೂ ಅವರ ಮೇಲೆ ಕ್ರಮ ಖಂಡಿತ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಅವರು ಎಚ್ಚರಿಸಿದ್ದಾರೆ.

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸೋಮವಾರ ಮೃಗಾಲಯಕ್ಕೆ ರಂಗಸ್ವಾಮಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಅವರ ತಂಡಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್​, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೇಹೊಸೂರ ಸಾಥ್ ಕೊಟ್ಟರು.

ಮೃಗಾಲಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಸದ್ಯ ಬದುಕುಳಿದಿರುವ 7 ಕೃಷ್ಣಮೃಗಗಳನ್ನು ಉಳಿಸಿಕೊಳ್ಳಲು ತೆಗೆದುಕೊಂಡ ಕ್ರಮದ ಬಗ್ಗೆ ಪರಿಶೀಲಿಸಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಅರಣ್ಯ ಇಲಾಖೆ ಸಚಿವರ ಸೂಚನೆಯಂತೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಮರಣೋತ್ತರ ಪರೀಕ್ಷೆ ಮತ್ತು ಲ್ಯಾಬ್​ನಿಂದ ವರದಿ ಬಂದ ಮೇಲೆ ಎಲ್ಲವೂ ಗೊತ್ತಾಗಲಿದೆ. ಎಲ್ಲೋ ಒಂದು ಕಡೆ ಲೋಪದೋಷ ಆಗಿರುತ್ತದೆ. ಅದು ತನಿಖೆ ಬಳಿಕವೇ ಗೊತ್ತಾಗಲಿದೆ ಎಂದರು.

ಇನ್ನು, ಮೂಕ ಪ್ರಾಣಿಗಳ ಸಾವಿಗೆ ಯಾರೇ ಕಾರಣವಾದರೂ ಅವರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ನುರಿತ ವೈದ್ಯರ ತಂಡ ಭೇಟಿ ನೀಡಿ ಚಿಕಿತ್ಸೆ ಕೊಡುವ ಕೆಲಸ ಮಾಡಿದೆ. ನಾನು ಇಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಬ್ಯಾಕ್ಟೀರಿಯಾ ವೈರಸ್​ನಿಂದ ಸಾವು ಆಗಿದೆ ಅಂತ ಮಾಹಿತಿ ನೀಡಿದ್ದಾರೆ. ಸಾವಿಗೆ ನಿಖರವಾದ ಅಂಶ ಇನ್ನೂ ಗೊತ್ತಾಗಿಲ್ಲ. ಈಗಾಗಲೇ ಸ್ಯಾಂಪಲ್ಸ್​ನ್ನು ಲ್ಯಾಬ್​ಗೆ ಕಳುಹಿಸಲಾಗಿದೆ. ನಮಗೆ ಮೇಲ್ನೋಟಕ್ಕೆ ತಪ್ಪಾಗಿದೆ ಅಂತ ಗೊತ್ತಾಗುತ್ತಿದೆ. ಮೃಗಾಲಯದ ಸಿಬ್ಬಂದಿ, ಅಧಿಕಾರಿ, ವೈದ್ಯರು ಯಾರೇ ಕೃಷ್ಣಮೃಗಗಳ ಸಾವಿಗೆ ಕಾರಣ ಎಂದು ಗೊತ್ತಾದರೂ ಕ್ರಮ ಖಂಡಿತ ಎಂದು ಸ್ಪಷ್ಟಪಡಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್​ ಮಾತನಾಡಿ, ‘ಬ್ಯಾಕ್ಟೀರಿಯಲ್ ಇನ್ಫೆಕ್ಷನ್​ನಿಂದ ಕೃಷ್ಣಮೃಗಗಳು ಸಾವನ್ನಪ್ಪುತ್ತಿವೆ ಅಂತಾ ತಜ್ಞ ವೈದ್ಯರು ಹೇಳಿದ್ದಾರೆ. ಸ್ಥಳೀಯ ವೈದ್ಯರಿಂದ ಮಾಹಿತಿ ಪಡೆದು ತಜ್ಞ ವೈದ್ಯರು ಚಿಕಿತ್ಸೆ ನೀಡಿ ಹೋಗಿದ್ದಾರೆ. ತಜ್ಞರು ಹೇಳುವ ಪ್ರಕಾರ, ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಸದ್ಯ ಬದುಕಿರುವ ಏಳು ಕೃಷ್ಣಮೃಗಗಳಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಹಾಗಾಗಿ, ಅವುಗಳ ಮೇಲೆ‌ ನಿಗಾ ಇಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಇನ್ನುಳಿದ ಕೃಷ್ಣಮೃಗಗಳ ಜೀವ ಉಳಿಸಿಕೊಳ್ಳಲು ಚಿಕಿತ್ಸೆಗೆ ಏಕೆ ಪ್ರಯತ್ನಿಸುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸ್ಥಳೀಯ ವೈದ್ಯರು ತಜ್ಞರ ಸಲಹೆ ಪಡೆದು, ಅವರ ಜೊತೆಗೆ ಸಮಾಲೋಚನೆ ಮಾಡಿದ ಬಳಿಕವೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮತ್ತೆ ತಜ್ಞ ವೈದ್ಯರು ಆಗಮಿಸಲಿದ್ದಾರೆ ಎಂದು ಮಂಜುನಾಥ ಚವ್ಹಾಣ್​ ತಿಳಿಸಿದರು.


Spread the love

About Laxminews 24x7

Check Also

ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ ಯುವಶಕ್ತಿಯಿಂದ ಮತದಾನ ಜಾಗೃತಿ ಅಭಿಯಾನ

Spread the love ಅಂಜುಮನ್ ಕಾಲೇಜಿನಿಂದ ಯುವಶಕ್ತಿ ಮತದಾನ ಜಾಗೃತಿ ಅಭಿಯಾನ ಯುವಶಕ್ತಿಯಿಂದ ಮತದಾನ ಜಾಗೃತಿ ಅಭಿಯಾನ ಅಂಜುಮನ್ ಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ