ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೃಷಿ ಭೂಮಿಯೂ ನಮ್ಮೆಲ್ಲರಿಗೆ ಅನ್ನ ನೀಡುವ ಬಟ್ಟಲು. ಅವುಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಿದೆ. ಆದ ಕಾರಣ ಭೂಮಿ ರೈತರ ಕೈಯಲ್ಲಿರಬೇಕು. ವಿವಿಧ ಕಾರ್ಯಗಳಿಗೆ ವರ್ಗವಣೆಯಾಗಬಾರದು ಎಂದು ತಿಳಿಸಿದರು.
‘ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಈಗಾಗಲೇ ರಾಜ್ಯದಲ್ಲಿ ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೇ ತಿದ್ದುಪಡಿ) ಮಸೂದೆ ಜಾರಿಗೆ ತರಲಾಗಿದೆ. ಜತೆಗೆ, ಕೇಂದ್ರ ಕೂಡ ಬಿತ್ತನೆ ಬೀಜಗಳ ಮಸೂದೆ-2019 ಸಿದ್ಧಪಡಿಸಿದೆ. ರೈತರನ್ನು ದಿವಾಳಿ ಎಬ್ಬಿಸುವ ಇಂತಹ ಕಾನೂನು ತರಲು ಹೊರಟಿರುವುದು ವಿಪರ್ಯಾಸ’ ಎಂದರು.
ಸರ್ಕಾರಗಳ ತಲೆಗಳು ಉರುಳಿ ಹೋಗುತ್ತವೆ. ಯಾವುದೇ ಕಾರ್ಪೊರೇಟ್ ಕಂಪೆನಿ ಬಂದು ರೈತರ ಜಮೀನಿನಲ್ಲಿ ಪ್ರವೇಶಿಸಿದರೆ ರೈತರು ಕ್ಷಮಿಸಲು ಸಾಧ್ಯವಿಲ್ಲ. ರೈತನ ಮಗ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಅವರು ಕೂಡ ರೈತರ ಹಿತ ಕಾಪಾಡುವ ಬದಲು ರೈತರನ್ನೇ ಮುಗಿಸಲು ಹೊರಟಿದ್ದಾರೆ. ಅದು ಸರಿಯಾದ ನಡವಳಿಕೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯದ ಘಟಕದ ಉಪಾಧ್ಯಕ್ಷ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಕಾರ್ಯದರ್ಶಿ ಶಿವಪ್ಪ, ಸಹಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ್, ಪದಾಧಿಕಾರಿಗಳಾದ ವೇಣುಗೋಪಾಲ್, ಉಮಾ, ಲಕ್ಷ್ಮಣರೆಡ್ಡಿ, ತಾದೂರು ಮಂಜುನಾಥ್, ರಮಣಾರೆಡ್ಡಿ, ರಾಮಾಂಜನಪ್ಪ, ಮುರುಳಿ, ಮಾಳಪ್ಪ ಹಾಜರಿದ್ದರು.