ದಾವಣಗೆರೆ: ದಸರಾ ಹಬ್ಬದಂದು ಬೊಂಬೆಗಳನ್ನು ಕೂರಿಸುವುದು ಈ ನೆಲದ ಸಂಪ್ರದಾಯ. ಆದರೆ, ಯಾವತ್ತಾದರೂ ನೀವು ವಿದೇಶಿ ಬೊಂಬೆಗಳನ್ನು ಕೂರಿಸಿದ್ದೀರಾ?. ಆದರೆ, ದಾವಣಗೆರೆಯಲ್ಲಿನ ದಂಪತಿಯೊಬ್ಬರು ವಿದೇಶಿ ಬೊಂಬೆಗಳನ್ನು ಕೂರಿಸಿ ದಸರಾ ಆಚರಿಸುತ್ತಿದ್ದಾರೆ. ಆಫ್ರಿಕಾ ಖಂಡದ ಹಲವು ವಿಶೇಷ ಬೊಂಬೆಗಳನ್ನು ತಂದು ಕಳೆದ 13 ವರ್ಷಗಳಿಂದ ದಸರಾ ಹಬ್ಬ ಆಚರಿಸುತ್ತಿದ್ದಾರೆ.
ಈ ಗೊಂಬೆ ಕೂರಿಸುವ ಪದ್ಧತಿಯು 18ನೇ ಶತಮಾನದಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಅದರದ್ದೇ ಆದ ಮಹತ್ವವಿದೆ. ದೇಶ – ವಿದೇಶಗಳನ್ನು ಸುತ್ತುವ ಹವ್ಯಾಸ ಇಟ್ಟುಕೊಂಡಿರುವ ದಾವಣಗೆರೆಯ ಮುರುಗೇಂದ್ರಪ್ಪ ಹಾಗೂ ಸುಮಂಗಲ ದಂಪತಿ, ಆಯಾ ದೇಶಗಳಲ್ಲಿ ಸಿಗುವ ಸುಂದರ ಮತ್ತು ಇತಿಹಾಸ ಸಾರುವ ಬೊಂಬೆಗಳನ್ನು ಶೇಖರಿಸುವುದಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಅವುಗಳನ್ನು ಹಲವು ವರ್ಷಗಳಿಂದ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದಾರೆ. ಸದ್ಯ ಈ ದಸರಾ ಹಿನ್ನೆಲೆಯಲ್ಲಿ ದಂಪತಿ ಕೂರಿಸಿರುವ ಒಂದೊಂದು ಗೊಂಬೆಗಳೂ ಒಂದೊಂದು ಪೌರಾಣಿಕ ಕಥೆಗಳನ್ನು ಸಾರುತ್ತಿವೆ.
21 ವರ್ಷ, 20 ದೇಶಗಳ ಸುತ್ತಾಟ: ದಾವಣಗೆರೆ ನಗರದ ಎಸ್ಎಸ್ ಬಡಾವಣೆಯ ನಿವಾಸಿ ಮುರುಗೇಂದ್ರಪ್ಪ ಹಾಗೂ ಸುಮಂಗಲ ದಂಪತಿಗಳು 21 ವರ್ಷಗಳನ್ನು ನೈಜೀರಿಯಾದಲ್ಲಿ ಕಳೆದಿದ್ದಾರೆ. ಟೆಕ್ಸಟೈಲ್ ಇಂಜಿನಿಯರ್ ಆಗಿದ್ದ ಮುರುಗೇಂದ್ರಪ್ಪ ನೈಜೀರಿಯಾ ಕಿನ್ಯಾ ಉಗಾಂಡಾ, ಕಿಂಬರ್ಲಿ, ಘಾನಾ ಕ್ಯೂಬಾ ಹೀಗೆ ಹತ್ತಾರು ಆಫ್ರಿಕನ್ ದೇಶಗಳನ್ನು ಸುತ್ತಿ ತಮ್ಮ ಪ್ರವಾಸ ಹಾಗೂ ವೃತ್ತಿ ಜೀವನದಲ್ಲಿ ಸಿಕ್ಕ ಕಲಾಕೃತಿಗಳನ್ನು ಸಂಗ್ರಹಿಸಿ ತಂದು ತಮ್ಮ ಮನೆಯನ್ನೇ ಮ್ಯೂಸಿಯಂ ಮಾಡಿದ್ದಾರೆ. ಅವರು ಆಫ್ರಿಕಾದಿಂದ ತಂದಿರುವ ಒಂದೊಂದು ವಸ್ತುವು ಒಂದೊಂದು ಕತೆ ಹೇಳುತ್ತಿವೆ.
“ಅಲ್ಲಿನ ಜನರ ಸೃಜನಶೀಲತೆ, ಕರಕುಶಲ ಕಲೆ ಬಗ್ಗೆ ಆಫ್ರಿಕನ್ನರಿಗೆ ಇರುವ ಪ್ರೀತಿ ಅವರ ವಸ್ತುಗಳಲ್ಲಿ ಕಾಣಬಹುದು. ಆಫ್ರಿಕನ್ನರು ತಮ್ಮ ಜೀವನೋಪಾಯಕ್ಕಾಗಿ ಕಲಾಕೃತಿಗಳನ್ನು ಕಡಿಮೆ ವೆಚ್ಚಕ್ಕೆ ಅಲ್ಲಿ ಮಾರುತ್ತಾರೆ. ಪುಡಿಗಾಸಿನ ಕಲಾಕೃತಿಗಳು ಭಾರತದಂತಹ ದೇಶದಲ್ಲಿ ತುಂಬಾ ಅಮೂಲ್ಯವಾಗಿವೆ. ದಸರಾ ಸಂದರ್ಭದಲ್ಲಿ ಅವುಗಳನ್ನು ಸ್ಥಳೀಯರಿಗೆ ಪರಿಚಯಿಸಿದರೆ ಅಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ” ಎಂದು ಗೃಹಿಣಿ ಸುಮಂಗಲ ಮಾಹಿತಿ ನೀಡಿದರು.
ಎರಡರಿಂದ ಮೂರು ಸಾವಿರ ಗೊಂಬೆಗಳು: ದಂಪತಿ ಎರಡರಿಂದ ಮೂರು ಸಾವಿರ ಗೊಂಬೆಗಳನ್ನು ಕೂರಿಸಿದ್ದು, ಈ ಗೊಂಬೆಗಳ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಇವರ ಮನೆಗೆ ಹರಿದು ಬರುತ್ತಿದೆ. ಪಟ್ಟದ ಹಾಗೂ ವಿದೇಶಿ ಗೊಂಬೆಗಳನ್ನು ನೋಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುವುದು ಇಲ್ಲಿ ಸಾಮಾನ್ಯವಾಗಿದೆ. 20-25 ದೇಶಗಳನ್ನು ಸುತ್ತಿ ಅಲ್ಲಿ ಸಿಗುವ ಆಯಾ ದೇಶದ ಗೊಂಬೆಗಳನ್ನು ತಂದು ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪನೆ ಮಾಡುವುದು ಈ ದಂಪತಿಯ ಹವ್ಯಾಸ.
ಅಶ್ವಯುಜ ಮಾಸದ ಪಾಡ್ಯದಿಂದ ದಶಮಿವರೆಗೆ 10 ದಿನ ಗೊಂಬೆ ಕೂರಿಸುವುದು ದಸರಾ ಸಂಪ್ರದಾಯ. ಅಂತೆಯೇ ಸುಮಂಗಲ – ಮುರುಗೇಂದ್ರಪ್ಪ ದಂಪತಿ ಕಳೆದ 13 ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದಾರೆ. ಹೀಗೆ ದಸರಾ ಹಬ್ಬಕ್ಕೆ ಮನೆಯಲ್ಲಿ ಗೊಂಬೆ ಕೂರಿಸುವುದು ಸುಮಂಗಲ ಅವರು ತಾಯಿ ಮನೆಯ ಪದ್ಧತಿಯಂತೆ. ಅ ಪದ್ಧತಿಯನ್ನೇ ಸುಮಂಗಲ ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ಮಣ್ಣು, ಪೇಪರ್, ಮರ, ಪಿಂಗಾಣಿ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ, ವೈರ್‌ನಿಂದ ತಯಾರಿಸಿದ ಗೊಂಬೆಗಳನ್ನು ವಿಶೇಷವಾಗಿ ಅಲಂಕರಿಸಿ ಕೂರಿಸಿಕೊಂಡು ಬರುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿ.