ಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಅದೊಂದು ಕುಟುಂಬದ ಟ್ರಸ್ಟ್, ಕಳ್ಳರ ಕೂಟ. ಹೀಗಾಗಿ ಉಚ್ಚಾಟನೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ನಾನು ಮಾತನಾಡಿಲ್ಲ” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಹರಿಹಾಯ್ದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಇಂದು ದಿ.ಉಮೇಶ್ ಕತ್ತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವ ಜಯಮೃತ್ಯುಂಜಯ ಶ್ರೀಗಳು ದಾವಣಗೆರೆಯಲ್ಲಿ ಆಸ್ತಿ ಮಾಡಿದ್ದಾರೆಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿ, “ಕೂಡಲಸಂಗಮ ಶ್ರೀಗಳು ಎಲ್ಲಾದರೂ ಆಸ್ತಿ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಬೇಕು, ಬ್ಲಾಕ್ಮೇಲ್ ಮಾಡಬಾರದು. ಎಲ್ಲಿ ಆಸ್ತಿ ಮಾಡಿದ್ದಾರೆ, ಯಾವ ಸರ್ವೆ ನಂಬರ್, ಉತಾರೆ ಎಲ್ಲಿ ಅಂತ ಬಹಿರಂಗವಾಗಿ ಹೇಳಬೇಕು. ನೀವು ಮಾಡಿರುವ ಟ್ರಸ್ಟ್ ಎರಡು ಕುಟುಂಬದ ಆಸ್ತಿಯಾಗಿದೆ. ನಾವು ಇದಕ್ಕೆ ಸೂಕ್ತ ದಾಖಲೆ ನೀಡುತ್ತೇವೆ. ದಾಖಲೆ ಇಲ್ಲದೇ ಮಾತನಾಡುವವರು ನಾಲಾಯಕ್ಕರು, ಮೂರ್ಖರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಜನಗಣತಿಯಲ್ಲಿ ಕೆಲವರು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಭಾರತ ಸಂವಿಧಾನದಲ್ಲಿ ಧರ್ಮದ ಸಂಕೇತ ಇಲ್ಲ. ಸಂವಿಧಾನದಲ್ಲಿ ಆರು ಧರ್ಮಕ್ಕೆ ಮಾತ್ರ ಮಾನ್ಯತೆ ಇದೆ. ದಲಿತರು ಹಾಗೂ ಎಲ್ಲಾ ಸಮುದಾಯದವರು ಹಿಂದೂ ಅಂತ ಬರೆಸುತ್ತಾರೆ. ಕೇಂದ್ರ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಮಾನ್ಯತೆ ಸಿಕ್ಕಿಲ್ಲ” ಎಂದರು.
“ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪನೆ ಮಾಡಿದ್ದಾರೆ ಎಂಬುದಕ್ಕೆ ದಾಖಲಾತಿ ಇಲ್ಲ. ಬಸವಣ್ಣವರು ಶಿವನ ಆರಾಧನೆ ಮಾಡುತಿದ್ದರು. ಅವರ ವಚನದಲ್ಲಿ ಕೂಡಲಸಂಗಮದೇವ ಎಂದು ಉಲ್ಲೇಖ ಮಾಡುತ್ತಿದ್ದರು. ಕೆಲವು ಕಮ್ಯುನಿಸ್ಟ್ ಮ್ಯಾಡ್ ಹೊಂದಿದ್ದ ಸ್ವಾಮಿಗಳು ಬಸವಣ್ಣನವರು ತಮ್ಮ ಮನೆ ಆಸ್ತಿ ಎಂದು ಮಾಡಿಕೊಂಡಿದ್ದಾರೆ” ಎಂದು ಹೇಳಿದರು.
Laxmi News 24×7