ಬೆಂಗಳೂರು,ಡಿ.26- ಬ್ರಿಟನ್‍ನಲ್ಲಿ ರೂಪಾಂತರಗೊಂಡ ಹೊಸ ಸ್ವರೂಪದ ಕೊರೊನಾ ವೈರಸ್ ಕಾಣಿಸಿಕೊಂಡರೂ ಅದನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಟ್ಟಪ್ಪಣೆ ವಿಧಿಸಿದೆ. ಯಾವುದೇ ವ್ಯಕ್ತಿಗೆ ಹೊಸ ಮಾದರಿಯ ಸೋಂಕು ವರದಿಯಲ್ಲಿ ಖಚಿತವಾದರೆ ಅದನ್ನು ತಕ್ಷಣವೇ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್‍ಗೆ) ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದೆ.
ಸ್ವತಃ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳೇ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಹೊಸ ಸ್ವರೂಪದ ಕೊರೊನಾ ಸೋಂಕು ಕಂಡುಬಂದರೆ ಅದನ್ನು ರಾಜ್ಯ ಸರ್ಕಾರಗಳು ಘೋಷಣೆ ಮಾಡಬಾರದೆಂದು ನಿರ್ದೇಶನ ನೀಡಿದ್ದಾರೆ.
ಬ್ರಿಟನ್‍ನಿಂದ ಸ್ವದೇಶಕ್ಕೆ ಆಗಮಿಸಿದ ಯಾವುದೇ ವ್ಯಕ್ತಿಗಳಲ್ಲಿ ಆ ದೇಶದ ಮಾದರಿಯ ಸೋಂಕು ಕಂಡುಬಂದರೆ ಅದನ್ನು ಖಚಿತಪಡಿಸಿಕೊಂಡು ಕೇಂದ್ರ ಸರ್ಕಾರವೇ ಘೋಷಣೆ ಮಾಡಲಿದೆ. ನೀವು ವರದಿಯನ್ನಷ್ಟೇ ಕಳುಹಿಸಿಕೊಡಬೇಕೆಂದು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಇದನ್ನು ಖಚಿತಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಬ್ರಿಟನ್‍ನಿಂದ ಆಗಮಿಸಿ ಕೊರೊನಾ ಪಾಸಿಟಿವ್ ಕಂಡುಬಂದಿರುವ ವ್ಯಕ್ತಿಗಳ ವೈದ್ಯಕೀಯ ವರದಿಯನ್ನು ನಾವು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಇದನ್ನು ರಾಜ್ಯ ಸರ್ಕಾರಗಳು ಘೋಷಣೆ ಮಾಡಬಾರದೆಂದು ಪ್ರಧಾನಮಂತ್ರಿ ಕಾರ್ಯಾಲಯ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.