ಹುಬ್ಬಳ್ಳಿ – ಕೆಎಲ್‌ಇ ಸಂಸ್ಥೆಯು ಕಲ್ಪನೆ ಮೀರಿ ಬೆಳೆದಿದೆ. ಸಪ್ತರ್ಷಿಗಳ ಕೊಡುಗೆ, ಮಹಾದಾನಿಗಳ ಸೇವಾ ಮನೋಭಾವ, ಡಾ.ಪ್ರಭಾಕರ ಕೋರೆ ಹಾಗೂ ತಂಡದವರ ಪರಿಶ್ರಮದಿಂದ ಕೆಎಲ್‌ಇ ಸಂಸ್ಥೆ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಕೆಎಲ್‌ಇ ವಿಶ್ವವಿದ್ಯಾಲಯವು (ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್) ಹುಬ್ಬಳ್ಳಿಯ ಗಬ್ಬೂರ ಕ್ರಾಸ್‌ದಲ್ಲಿ ಗುರುವಾರ ಆಯೋಜಿಸಿದ್ದ ’ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆಯ’ ಶಿಲಾನ್ಯಾಸ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ವಿಕಾಸದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಪಾತ್ರ ಅತೀ ಮಹತ್ವದ್ದಾಗಿದೆ. ಕೆಎಲ್‌ಇ ಸಂಸ್ಥೆ ಈ ಎರಡೂ ಆಶಯಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಅದರ ಸಾಧನೆಗೆ ಸಾಕ್ಷಿ. ಭಾರತ ಇಂದು ತುರ್ತಾಗಿ ಆರೋಗ್ಯ ಸುಧಾರಣೆಗಳನ್ನು ಹೊಂದಲು ಹೋರಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೆಎಲ್‌ಇ ಸಂಸ್ಥೆಯಂತಹ ಆರೋಗ್ಯ ಸೇವೆಗಳು ಜನಸಮುದಾಯಕ್ಕೆ ಅತ್ಯಗತ್ಯವಾಗಿವೆ. ಸ್ಕಿಲ್ ಡೆವಲಪ್‌ಮೆಂಟ್ ಎನ್ನುವಂತಹದ್ದು ಅನುಕರಣೀಯ ರೂಪದ್ದಾಗಿರಬೇಕು. ಸರ್ಕಾರ ಇದಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಶಿಕ್ಷಣವನ್ನು ಪಾರದರ್ಶಕ ನೆಲೆಯಲ್ಲಿ ನೀಡುವ ಮೂಲಕ ದೇಶದ ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವುದು ಅವಶ್ಯ. ಕೆಎಲ್‌ಇ ಸಂಸ್ಥೆ ಮೆಡಿಕಲ್ ಕಾಲೇಜ್ ಸ್ಥಾಪಿಸುತ್ತಿರುವುದು ತುಂಬಾ ಸಂತೋಷದ ಸಂಗತಿ. ಸರ್ಕಾರ ಅವರಿಗೆ ಎಲ್ಲ ರೀತಿಯ ನೆರವು ನೀಡುವುದೆಂದು ಪ್ರಹ್ಲಾದ ಜೋಶಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಬಹೃತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆ ಅಗಾಧವಾದುದ್ದನ್ನೆ ನಿರ್ಮಿಸುತ್ತದೆ. ಡಾ.ಪ್ರಭಾಕರ ಕೋರೆ ಇಚ್ಛಾಶಕ್ತಿ ಬಹುದೊಡ್ಡದು. ಅವರು ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರುತ್ತಾರೆ. ಅವರ ಈ ಮಹತ್‌ಕಾರ್ಯಕ್ಕೆ ಸರ್ಕಾರವು ಕೈಜೋಡಿಸುತ್ತದೆ ಎಂದು ಹೇಳಿದರು.
ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತ, ಇಲ್ಲಿ ಸ್ಥಾಪನೆಗೊಳ್ಳುವ ಮೆಡಿಕಲ್ ಕಾಲೇಜು ದೇಶಕ್ಕೆ ಮಾದರಿಯ ಕಾಲೇಜು ಆಗಿ ರೂಪುಗೊಳ್ಳಲಿದೆ. ಕೆಎಲ್‌ಇ ಸಂಸ್ಥೆ ನಮ್ಮದು. ಅದು ಮತ್ತಷ್ಟು ವಿಸ್ತಾರೋನ್ನತವಾಗಿ ಬೆಳೆಯಬೇಕು. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲೇಜು ಹಾಗೂ ಆಸ್ಪತ್ರೆ ಈ ಭಾಗದ ಬೆಳಕಾಗಲಿ ಎಂದು ಶುಭಹಾರೈಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನವನ್ನು ನೀಡುತ್ತ ಹುಬ್ಬಳ್ಳಿ ಮೂರುಸಾವಿರಮಠದ ಪರಮಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕೆಎಲ್‌ಇ ಸಂಸ್ಥೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅನುಪಮವಾದ ಕೊಡುಗೆಯನ್ನು ನೀಡಿದೆ. ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕೆಂಬುದು ನಮ್ಮ ಗುರುಗಳ ಒತ್ತಾಯ ಹಾಗೂ ಸಂಕಲ್ಪವಾಗಿತ್ತು. ಡಾ.ಪ್ರಭಾಕರ ಕೋರೆಯವರಿಗೆ ೨೦೦೩ರಲ್ಲಿಯೇ ಆದೇಶವನ್ನು ನೀಡಿದ್ದರು. ಅವರ ಇಚ್ಛೆಯಂತೆಯೇ ಕೆಎಲ್‌ಇ ಸಂಸ್ಥೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಿಸುತ್ತಿರುವುದು ಅತೀವ ಸಂತೋಷ ಹಾಗೂ ಆನಂದವನ್ನುಂಟು ಮಾಡಿದೆ ಎಂದು ನುಡಿದರು.
ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕಿದ ಸಪ್ತರ್ಷಿಗಳ ತ್ಯಾಗ ಬಹುದೊಡ್ಡದು. ಅವರು ಧರ್ಮಾತೀತ, ಜಾತ್ಯಾತೀತವಾಗಿ, ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಅವರ ಅಕ್ಷರ ದಾಸೋಹದ ಪ್ರತಿಫಲವಾಗಿಯೇ ಕೆಎಲ್‌ಇ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ. ಲಿಂಗೈಕ್ಯ ಜಗದ್ಗುರುಗಳಾದ ಗಂಗಾಧರ ಮಹಾಸ್ವಾಮಿಗಳ ಇಚ್ಛೆಯಂತೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಿಸಲು ಕೆಎಲ್‌ಇ ಸಂಸ್ಥೆ ಸುಮಾರು ೫೦೦ ಕೋಟಿಗೂ ಮಿಕ್ಕಿ ಹಣವನ್ನು ತೊಡಗಿಸುತ್ತಿದೆ. ದಾನಿಗಳು ಮಹಾದಾನಿಗಳಿಂದ ಬೆಳೆದಿರುವ ಕೆಎಲ್‌ಇ ಸಂಸ್ಥೆಗೆ ಸಮಾಜದ ಆಶೀರ್ವಾದ ಸದಾ ಹೀಗೆಯೇ ಇರಲೆಂದು ಹೇಳಿದರು.
ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್‌ನ ಸದಸ್ಯ ಬಸವರಾಜ ಹೊರಟ್ಟಿ, ವಿಜಯ ಸಂಕೇಶ್ವರ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.