ಬೆಂಗಳೂರು,ಡಿ.23- ಈಗಾಗಲೇ ನಿರ್ಧಾರವಾಗಿರುವಂತೆ ಜ.1ರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ರಾಜ್ಯಾದ್ಯಂತ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಶಾಲಾಕಾಲೇಜುಗಳನ್ನು ತೆರೆಯುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಆರಂಭಕ್ಕೂ ಮುನ್ನ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಕೊರೊನಾ ರೂಪಾಂತರ ವೈರಸ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರ ಜೊತೆ ಚರ್ಚೆ ಮಾಡಲಾಗಿದೆ. ಹೀಗಾಗಿ ಈಗಾಗಲೇ ನಿಗದಿಯಾಗಿರುವಂತೆ ಜನವರಿ 1ರಿಂದಲೇ 10 ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿವೆ. ಹೊಸ ವೈರಸ್ ಬಗ್ಗೆ ಜನತೆ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆಯಿಲ್ಲ. ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನೇನು ಕ್ರಮ ಕೈಗೊಳ್ಳಬೇಕೊ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್‍ನ ಹೊಸ ಸೋಂಕು ಹಬ್ಬುತ್ತಿರುವ ಬಗ್ಗೆ ಸ್ವತಃ ನಾನೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸಲಹೆ ಮಾಡಿದ್ದಾರೆ. ಅದರಂತೆ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ವೈರಸ್ ಬಗ್ಗೆ ಪ್ರತಿದಿನ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ತಜ್ಞರು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸೂಚನೆ ನೀಡುತ್ತಾರೋ ಅವೆಲ್ಲವನ್ನೂ ಪಾಲನೆ ಮಾಡುತ್ತೇವೆ. ಗಾಳಿ ಸುದ್ದಿ ಅಥವಾ ವದಂತಿಗಳ ಬಗ್ಗೆ ಪೋಷಕರು ಕಿವಿಗೊಡಬಾರದೆಂದು ಸುರೇಶ್‍ಕುಮಾರ್ ಮನವಿ ಮಾಡಿದರು.