ಬೆಂಗಳೂರು, ಡಿ. 23- ನೇಗಿಲು ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ…. ಅನ್ನ ನೀಡುವರೇ ನಮ್ಮೋರು…. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ…. ಹೀಗೆ ರೈತನ ಹಾಗೂ ಅವನ ಬೆವರಿನ ಬೆಲೆ ತಿಳಿಸುವ ಅನೇಕ ಗೀತೆಗಳು ಕನ್ನಡ ಚಿತ್ರಗಳಲ್ಲಿವೆ, ಅದೇ ರೀತಿ ನಮ್ಮ ಸ್ಯಾಂಡಲ್‍ವುಡ್‍ನ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಸೇರಿದಂತೆ ಹಲವು ನಟರು ಕೂಡ ರೈತರ ಪಾತ್ರಗಳಲ್ಲಿ ನಟಿಸುವ ಮೂಲಕ ಅನ್ನದಾತನ ಹಿರಿಮೆಯನ್ನು ಸಾರಿದ್ದಾರೆ.
ಇಂದು ರಾಷ್ಟ್ರೀಯ ರೈತ ದಿನಾಚರಣೆ, ದೇಶಕ್ಕೆ ಅನ್ನ ನೀಡುವ ರೈತರನ್ನು ನೆನೆದು ಹಲವು ಸ್ಯಾಂಡಲ್‍ವುಡ್ ನಟರು ರೈತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಚಾಲೆಂಜಿಂಗ್‍ಸ್ಟಾರ್ ದರ್ಶನ್ ಕೂಡ ಐರಾವತ ಚಿತ್ರದಲ್ಲಿ ರೈತನಾಗಿದ್ದು ಇಂದು ಅವರು ರೈತರಿಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ರೈತರು ನಮ್ಮ ನಾಡಿನ ನಿಜವಾದ ವೀರರಾಗಿದ್ದು, ಅವರು ಪಡುವ ಶ್ರಮದಿಂದಲೇ ಎಷ್ಟೋ ಜನರಿಗೆ ತುತ್ತಿನ ಊಟ ಸಿಕ್ಕುತ್ತಿದೆ, ಎಂತಹ ಬರಡು ಭೂಮಿಯಲ್ಲೂ ಆಹಾರ ಬೆಳೆಯುವ ಧೈರ್ಯ ರೈತರಲ್ಲಿದೆ, ಅವರು ಭೂಮಿಯನ್ನು ತಮ್ಮ ತಾಯಿಯಂತೆ ಭಾವಿಸುವುದರಿಂದ ಅವರ ಜೀವವನ್ನು ಮಣ್ಣಿನಲ್ಲಿ ಇರಿಸಿ ಬದುಕುತ್ತಿದ್ದಾರೆ , ತಾವು ಕಷ್ಟ ಪಟ್ಟರೂ ನಾಡಿನ ಜನರ ಹಸಿವಿನ ಚೀಲವನ್ನು ತುಂಬಿಸುತ್ತಿರುವ ರೈತರ ಪರಿಶ್ರಮಕ್ಕೆ ಒಂದು ಸಲಾಮ್ ಎಂದು ತಮ್ಮ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.
ನಟ ಜಗ್ಗೇಶ್ ಕೂಡ ಟ್ವಿಟ್ ಮಾಡಿದ್ದು, ನಮ್ಮ ಕರುನಾಡಿನ ಮಣ್ಣಿನಲ್ಲಿ ಸಿಗುವ ಸುಖ ಎಲ್ಲೂ ಸಿಗಲ್ಲ, ನಾನು ಕೂಡ ಮಣ್ಣಿನ ಮಗನೇ ನಮ್ಮ ಅಪ್ಪ, ಚಿಕ್ಕಪ್ಪಂದಿರು ಕೂಡ ಬೇಸಾಯ ಮಾಡುತ್ತಿದ್ದರು, ನಾನು ಅವರ ನೆರಳಿನಲ್ಲಿ ಬೆಳೆದವನು, ಆದರೆ ಇಂದು ಗ್ರಾಮೀಣ ಪ್ರದೇಶದ ಬಹುತೇಕ ಯುವಕರು ಮಣ್ಣಿನ ಋಣ ತೀರಿಸದೆ ಹಣ ಗಳಿಸುವುದನ್ನೇ ದೃಷ್ಟಿ ಮಾಡಿಕೊಂಡು ನಗರಕ್ಕೆ ಬಂದು ನೆಲೆಸಿರುವುದರಿಂದ ಬಹುತೇಕ ಭೂಮಿಯು ಬೇಸಾಯವನ್ನೇ ಕಾಣದೆ ಬಣಗುಡುತ್ತಿದೆ. ಮಣ್ಣಿನಲ್ಲಿರುವ ಸುಖವನ್ನು ಅರಿತು ಯುವಜನತೆ ಮತ್ತೆ ಬೇಸಾಯದತ್ತ ಮುಖ ಮಾಡಲಿ ಎಂದು ಆಶಿಸಿರುವ ಅವರು ಜೈಕಿಸಾನ್ ಎಂಬ ಘೋಷ ವಾಕ್ಯವನ್ನು ಹೊರಹಾಕಿದ್ದಾರೆ.