ಬೆಂಗಳೂರು: ವೃದ್ಧನನ್ನು ಒಂದು ವಾರ ಡಿಜಿಟಲ್ ಬಂಧನದಲ್ಲಿಟ್ಟ ಸೈಬರ್ ವಂಚಕರು 1.77 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸದಾನಂದನಗರದ ಎನ್‌ಜಿಇಎಫ್ ಲೇಔಟ್ ನಿವಾಸಿ ಜಿ.ವಸಂತ ಕುಮಾರ್ (81) ಸೈಬರ್ ವಂಚನೆಗೆ ಒಳಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ನಗರದ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜುಲೈ 23ರಂದು ಪ್ರಕರಣ ದಾಖಲಾಗಿದೆ.
ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಜುಲೈ 5ರಂದು ಕರೆ ಮಾಡಿದ್ದ ಸಂದೀಪ್ ಜಾಧವ್ ಎಂಬಾತ, ತಮ್ಮ ಆಧಾರ್ ನಂಬರ್‌ನಿಂದ ಜೆಟ್ ಏರ್‌ವೇಸ್ ಸಂಸ್ಥೆಯ ನರೇಶ್ ಗೋಯಲ್ ಎಂಬವರ ಹೆಸರಿಗೆ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದಾನೆ. ಜುಲೈ 9ರಿಂದ ಜು.15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದ ವಂಚಕ, ವಿಡಿಯೋ ಕರೆ ಮೂಲಕ ವಾಟ್ಸ್ಆ್ಯಪ್ನಲ್ಲಿ ನಕಲಿ ಬಂಧನದ ವಾರಂಟ್ ತೋರಿಸಿ ಆತಂಕ ಹುಟ್ಟಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.