Breaking News

ಬಿಜೆಪಿ-ಜೆಡಿಎಸ್ ವಿಲೀನ..? ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ..!

Spread the love

ಬೆಂಗಳೂರು,ಡಿ.22- ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣದ ಮಾತುಗಳು ಕೇಳಿ ಬರುತ್ತಿದೆ. ರಾಜ್ಯದ ಏಕೈಕ ಪ್ರಭಾವಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎನ್ನುವ ಚರ್ಚೆ ಆರಂಭಗೊಂಡಿದೆ. ಸ್ವತಃ ಉಭಯ ಪಕ್ಷಗಳ ಪ್ರಮುಖ ನಾಯಕರೇ ನೇರವಾಗಿ ಸ್ಪಷ್ಟೀಕರಣ ನೀಡುತ್ತಿರುವುದು ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ.

ಮೈತ್ರಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದನಂತರ ಹಳೇ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧ ಹಳಸಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಬಿಜೆಪಿ ಜೊತೆಯಲ್ಲೇ ಜೆಡಿಎಸ್ ಸ್ನೇಹ ಬೆಳೆಸುತ್ತಿದೆ. ಇದಕ್ಕೆ ವಿಧಾನ ಪರಿಷತ್‍ನಲ್ಲಿ ಬಿಜೆಪಿ ನೀಡಿದ್ದ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ.

ಇದು ಇಷ್ಟಕ್ಕೆ ನಿಂತಿಲ್ಲ, ರಾತ್ರೋ ರಾತ್ರಿ ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎನ್ನುವ ಸುದ್ದಿಯೊಂದು ಹಬ್ಬಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಬಗ್ಗೆ ಬಿಜೆಪಿಯಲ್ಲಿ ಹಾಗೂ ಬಿಜೆಪಿ ಬಗ್ಗೆ ಜೆಡಿಎಸ್‍ನಲ್ಲಿ ಮೃದು ಧೋರಣೆ ನಿಲುವುಗಳು, ಹೇಳಿಕೆಗಳು ಕೂಡ ಇಂತಹ ಕುತೂಹಲಕ್ಕೆ ಕಾರಣವಾಗಿದೆ.

ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಮೂಲಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಸುದ್ದಿಯನ್ನು ತಳ್ಳಿಹಾಕಿದ್ದರು. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ವಿಲೀನ ಕೇವಲ ವದಂತಿ ಅಂತಹ ಯಾವುದೇ ಸಾಧ್ಯತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಕೇವಲ ವದಂತಿಯಾಗಿದ್ದರೆ ತರಾತುರಿಯಲ್ಲಿ ಉಭಯ ಪಕ್ಷಗಳ ಅಗ್ರ ನಾಯಕರು ಈ ರೀತಿ ಸ್ಪಷ್ಟೀಕರಣ ಏಕೆ ನೀಡುತ್ತಿದ್ದರು ಎನ್ನುವ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ.

ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಿದ ನಂತರವೂ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗುತ್ತದೆ ಎನ್ನುವ ಸುದ್ದಿಗೆ ತೆರೆ ಬಿದ್ದಿಲ್ಲ, ಬಿಜೆಪಿ ನಾಯಕರು ವಿಲೀನ ಸಾಧ್ಯತೆ ಕುರಿತ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಒಂದು ಪಕ್ಷವೇ ಬಿಜೆಪಿಯಲ್ಲಿ ವಿಲೀನವಾಗಬಹುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದರು. ಜೆಡಿಎಸ್ ಪಕ್ಷ ಬಿಜೆಪಿ ವಿಲೀನವಾಗಲಿದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿ ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದಾರೆ.

ದೇವೇಗೌಡರ ಆಲೋಚನೆಗಳು ಇಂದಿನ ರಾಜಕೀಯ ಸನ್ನಿವೇಶದಲ್ಲಿ ನಡೆಯುವುದಿಲ್ಲ, ಬಿಜೆಪಿಯೊಂದಿಗೆ ಹೋಗಬೇಕಾಗಲಿದೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮೈತ್ರಿ ಕುರಿತು ಸುಳಿವು ನೀಡಿದ್ದಾರೆ. ಇದು ಪರೋಕ್ಷವಾಗಿ ಪಕ್ಷ ವಿಲೀನದ ಮೊದಲ ಹಂತ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಶತ್ರುವಿನ ಶತ್ರು ಮಿತ್ರ ಎನ್ನುವ ರಾಜಕೀಯ ಪರಿಭಾಷೆಯಂತೆ ನಿದ್ದೆಗಣ್ಣಲ್ಲಿಯೂ ಕಾಂಗ್ರೆಸ್ ನಮ್ಮ ಶತ್ರು ಎಂದು ಹೇಳುತ್ತೇವೆ. ಜೆಡಿಎಸ್ ಆಗಾಗ ನಮಗೆ ಹತ್ತಿರ ಬರುತ್ತದೆ ದೂರ ಹೋಗುತ್ತದೆ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡುವ ಮೂಲಕ ಮೈತ್ರಿ ಸಾಧ್ಯತೆ ಕುರಿತ ಸುಳಿವು ನೀಡಿದ್ದಾರೆ. ಇದು ಕೂಡ ಭವಿಷ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ