Breaking News

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ಮೇಲಿನ ಸಂಚಾರ ನಿಷೇಧ ಮಾಡಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

Spread the love

ಗಂಗಾವತಿ (ಕೊಪ್ಪಳ) : ತುಂಗಭದ್ರಾ ಜಲಾಶಯದಿಂದ ನದಿಗೆ 90 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಿದ ಪರಿಣಾಮ, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ಮೇಲಿನ ಸಂಚಾರ ನಿಷೇಧ ಮಾಡಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

ಲೋಕೋಪಯೋಗಿ ಇಲಾಖೆಯ ಗಂಗಾವತಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್ ಈ ಆದೇಶ ಹೊರಡಿಸಿದ್ದು, ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ ಸೇತುವೆ ಮೇಲಿನ ವಾಹನ ಮತ್ತು ಜನ ಸಂಚಾರ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪ್ರತಿಗಳನ್ನು ರವಾನಿಸಿದ್ದಾರೆ.

ಇದರಿಂದಾಗಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಮಧ್ಯೆ ಇದ್ದ ಅಂತರ್​​ ಜಿಲ್ಲಾ ನೇರ ಸಂಪರ್ಕ ಸ್ಥಗಿತವಾಗಿದೆ. ಹೀಗಾಗಿ ಗಂಗಾವತಿ – ಕಂಪ್ಲಿ ಮಧ್ಯದ ಸಂಚಾರ ಅಥವಾ ಬಳ್ಳಾರಿ-ಕೊಪ್ಪಳ ಜಿಲ್ಲೆಯ ಸಂಚಾರಕ್ಕೆ ಸುತ್ತು ಬಳಸಿ ಬರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಭಾನುವಾರ ಮಧ್ಯಾಹ್ನದವರೆಗೂ ತುಂಗಭದ್ರಾ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ನೀರನ್ನು ನದಿಯ ಮೂಲಕ ಹೊರಕ್ಕೆ ಬಿಡಲಾಗಿತ್ತು. ಇದರ ಪ್ರಮಾಣವನ್ನು ಜಲಾಶಯದ ಅಧಿಕಾರಿಗಳು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕಂಪ್ಲಿ- ಗಂಗಾವತಿ ಜನರ ಪರದಾಟ: ಕಂಪ್ಲಿ ಮತ್ತು ಗಂಗಾವತಿ ಆಡಳಿತಾತ್ಮಕವಾಗಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗೆ ಸೇರಿವೆಯಾದರೂ, ಭೌಗೋಳಿಕವಾಗಿ ಎರಡು ತಾಲೂಕಿನ ಗಡಿಗಳು ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿವೆ. ಚಿಕ್ಕಜಂತಕಲ್-ಕಂಪ್ಲಿ ಬಳಿ ಇರುವ ಸುಮಾರು ಒಂದು ಕಿಲೋ ಮೀಟರ್ ಉದ್ದದ ಸೇತುವೆಯೇ ಈ ಎರಡೂ ತಾಲೂಕನ್ನು ವಿಭಜಿಸಿದೆ.

ಕಂಪ್ಲಿಯ ಬಹುತೇಕ ಜನ ಶಿಕ್ಷಣ, ಆರೋಗ್ಯ, ತರಕಾರಿ, ಹಣ್ಣು, ಕಿರಾಣಿ, ಕಬ್ಬಿಣ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯಂತ ಕಾರಣಕ್ಕೆ ಗಂಗಾವತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದೀಗ ಕಂಪ್ಲಿ ಸೇತುವೆ ಮುಳುಗಡೆಯಾದರೆ, ಜನ ಇನ್ನಿಲ್ಲದಂತೆ ಪರದಾಡುವ ಸನ್ನಿವೇಶ ನಿರ್ಮಾಣವಾಗಲಿದೆ.

ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿರುವ ಗಂಗಾವತಿ ತಾಲೂಕಿನ ಗಡಿಗೆ ಬರಲು, ಸುತ್ತು ಬಳಸಿ ಬುಕ್ಕಸಾಗರ, ಕಡೇಬಾಗಿಲು ಸೇತುವೆ ದಾಟಿ ಸುಮಾರು 20 ಕಿಲೋ ಮೀಟರ್ ಸುತ್ತು ಬಳಸಿ ಗಂಗಾವತಿಗೆ ಬರಬೇಕಾದ ಸ್ಥಿತಿ ಇದೆ. ಮುಖ್ಯವಾಗಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಯಾಗಿದೆ.

ಗ್ರಾಮಗಳಲ್ಲಿ ಡಂಗೂರ : ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯ ಸನಿಹಕ್ಕೆ ಹೋಗದಂತೆ ನದಿಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಡಂಗುರ ಸಾರಲಾಗುತ್ತಿದೆ.

ಆನೆಗೊಂದಿ, ಸಣಾಪುರ, ಸಂಗಾಪುರ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಲ್ಲಿ ಡಂಗುರ ಸಾರುವ ಮೂಲಕ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಲರ್ಟ್ ಇರುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಸಮಾಧಿ ಮುಳುಗಡೆ : ಪರಿಣಾಮ ತಾಲೂಕಿನ ಸಣಾಪುರದ ಬಳಿ ಇರುವ ಕರಿಯಮ್ಮನಗಡ್ಡೆ, ವಿರುಪಾಪುರ ಗಡ್ಡೆಗೆ ಸಂಪರ್ಕ ಸ್ಥಗಿತವಾಗಿದೆ. ಅಲ್ಲದೇ ಆನೆಗೊಂದಿ ಬಳಿಯ ಐತಿಹಾಸಿಕ ಶ್ರೀಕೃಷ್ಣದೇವರಾಯನ ಸಮಾಧಿ ಬಹುತೇಕ ಮುಳುಗಡೆಯಾಗಿದೆ.

ಹನುಮನಹಳ್ಳಿ ಸಮೀಪದ ಋಷಿಮುಖ ಪರ್ವತ, ಆನೆಗೊಂದಿ ಸಮೀಪದ ಪ್ರಮುಖ ಧಾರ್ಮಿಕ ತಾಣ ನವವೃಂದಾವನಗಡ್ಡೆಗೆ ಸಂಪರ್ಕ ಸ್ಥಗಿತವಾಗಿದೆ. ಅಲ್ಲದೇ ಆನೆಗೊಂದಿಯ ತಳವಾರಘಟ್ಟದ ಬಳಿ ನದಿಗೆ ಹಾಕಲಾಗುತ್ತಿದ್ದ ನಾಡದೋಣಿ ಸಂಚಾರವೂ ಸ್ಥಗಿತವಾಗಿದೆ.


Spread the love

About Laxminews 24x7

Check Also

ಯುಗಾದಿ, ರಂಜಾನ್ – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ

Spread the loveಬೆಂಗಳೂರು: ಯಗಾದಿ  ಹಾಗೂ ರಂಜಾನ್  ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ  ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ