ಬೆಂಗಳೂರು: ಉಂಡ ಮನೆಗೆ ದ್ರೋಹ ಎಂಬಂತೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಲ್ಯಾಪ್ ಟಾಪ್ಗಳನ್ನು ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಿಂದ ಬೆಟ್ಟಿಂಗ್ ಆಡುತ್ತಿದ್ದ ಮಾಜಿ ನೌಕರನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ಮಂಗಳೂರು ಮೂಲದ ಸುಬ್ರಹ್ಮಣ್ಯ ಪ್ರಸಾದ್ (34) ಬಂಧಿತ ಆರೋಪಿ. ಆರೋಪಿಯಿಂದ 19 ಲಕ್ಷ ರೂ. ಮೌಲ್ಯದ ಲ್ಯಾಪ್ ಟಾಪ್ಗಳು, 5 ಐಫೋನ್ಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಆರೋಪಿಯು ಸ್ಟೋರ್ ಇನ್ ಚಾರ್ಜ್ ಆಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಈತ ಕೆಲಸ ತೊರೆದ ಬಳಿಕ ಸ್ಟೋರ್ನಲ್ಲಿ ಪರಿಶೀಲಿಸಿದಾಗ 56 ಲ್ಯಾಪ್ ಟಾಪ್ ಹಾಗೂ 16 ಐಫೋನ್ ಕಳವು ಆಗಿರುವುದು ಬೆಳಕಿಗೆ ಬಂದಿತ್ತು. ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡ: ಆರೋಪಿಯು ತನ್ನ ಪತ್ನಿಯ ಚಿನ್ನ ಅಡವಿಟ್ಟು ಬಂದ ಹಣದಿಂದ ಬೆಟ್ಟಿಂಗ್ ಆಡುತ್ತಿದ್ದ. ಇದೇ ಕಾರಣಕ್ಕೆ ವೈಮನಸ್ಸು ಉಂಟಾಗಿ ಆತ ಪತ್ನಿಯಿಂದ ದೂರವಾಗಿದ್ದ. ದಿನೇ ದಿನೆ ಬೆಟ್ಟಿಂಗ್ ವ್ಯಾಮೋಹ ಹೆಚ್ಚಾಗುತ್ತಿದ್ದಂತೆ, ಅಕ್ರಮವಾಗಿ ಹಣ ಸಂಪಾದನೆಗೆ ಮುಂದಾಗಿದ್ದ. ಕಂಪನಿ ಸೂಚಿಸಿದಕ್ಕಿಂತ ಹೆಚ್ಚು ಲ್ಯಾಪ್ ಟಾಪ್ ಹಾಗೂ ಐಫೋನ್ಗಳನ್ನು ಆರ್ಡರ್ ಮಾಡುತ್ತಿದ್ದ. ಹೆಚ್ಚುವರಿ ಇರುವ ಲ್ಯಾಪ್ ಟಾಪ್ ಹಾಗೂ ಐಪೋನ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕೆಲಸ ಮಾಡುವಾಗ ಎಲ್ಲವೂ ಸರಿಯಿರುವಂತೆ ನೋಡಿಕೊಂಡಿದ್ದ. ಆತ ಕಂಪನಿಯಲ್ಲಿ ಕೆಲಸ ತೊರೆದ ಬಳಿಕ ತಡವಾಗಿ ಕಂಪನಿಯು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಕದ್ದ ಲ್ಯಾಪ್ ಟಾಪ್ ಮಾರಾಟದಿಂದ ಬಂದ ಹಣವನ್ನು ಜೂಜಾಡಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.