ಬೆಂಗಳೂರು: ನಿಗದಿ ಮಾಡಿದ್ದ ಪ್ರಯಾಣ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿ ಕಾನೂನು ಬಾಹಿರವಾಗಿ ಆಟೋ ಚಾಲನೆ ಮಾಡುತ್ತಿದ್ದವರ ಮೇಲೆ ಸೋಮವಾರ ನಗರದ 11 ಆರ್ಟಿಒ ಕಚೇರಿಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಸರ್ಕಾರ ನಿಗದಿಗೊಳಿಸಿದ ಕನಿಷ್ಠ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಮಾಹಿತಿ ಆಧರಿಸಿ ಇಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ಟಿಒ) 22 ತಂಡಗಳಾಗಿ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿದ್ದ 98 ಆಟೊಗಳನ್ನ ಮುಟ್ಟುಗೋಲು ಹಾಕಿ 98 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರ್ಯಾಪಿಡೋ, ಉಬರ್ ಬೈಕ್ ಟ್ಸಾಕ್ಸಿಗಳನ್ನ ನಿಷೇಧಿಸಿತ್ತು. ಇದನ್ನ ದುರ್ಬಳಕೆ ಮಾಡಿಕೊಂಡ ಆಟೊ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಬಾಡಿಗೆ ಹಣ ವಿಧಿಸುತ್ತಿದ್ದರು. ಸಾರ್ವಜನಿಕರಿಂದ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಸೋಮವಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.