ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸ್ ಠಾಣೆಗೆ ಬಿಜೆಪಿ ನಿಯೋಗ ದೂರು ನೀಡಿದೆ.
ಟಿ.ಎಫ್.ಹಾದಿಮನಿ ಎಂಬ ವ್ಯಕ್ತಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಆಗುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾದಿಮನಿ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಟಿ.ಎಫ್.ಹಾದಿಮನಿ ಹರಿಬಿಟ್ಟಿದ್ದಾರೆ. ಮೋದಿ ಅವರ ಬಗ್ಗೆ ಕೋಟ್ಯಂತರ ಜನರು ಗೌರವ – ಅಭಿಮಾನ ಹೊಂದಿದ್ದು, ಅವರ ಮನಸ್ಸಿಗೆ ಈ ಪೋಸ್ಟ್ ನೋಡಿ ನೋವಾಗಿದೆ. ಮೋದಿಯವರಿಗೆ ಕೆಟ್ಟ ಹೆಸರು ತರುವುದು ದೊಡ್ಡ ತಪ್ಪು ಎಂದರು.
ಮೋದಿಯವರ ಚಾರಿತ್ರ್ಯ ವಧೆ ಮಾಡುವ ಹಾದಿಮನಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಶವಂತಪುರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಎಫ್‍ಐಆರ್ ಮಾಡುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಹೇಳಿದರು.