ಮಂಡ್ಯ (ಕರ್ನಾಟಕ ವಾರ್ತೆ):- ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣಪತ್ರವನ್ನು ಸಕಾಲ ಸೇವೆಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಸಾರ್ವಜನಿಕರು ಇ-ಜನ್ಮ ವೆಬ್‍ಸೈಟ್‍ಗೆ ಲಾಗ್‍ಇನ್ ಆಗಿ 07 ದಿನಗಳೊಳಗೆ ಮಕ್ಕಳ ಜನನ ಪ್ರಮಾಣ ಪತ್ರ ಅಥವಾ ತಮ್ಮ ಸಂಬಂಧಿಕರ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ ವೆಂಕಟೇಶ್ ರವರು ತಿಳಿಸಿದರು.
ಮಂಡ್ಯ ಜಿಲ್ಲೆಯ ಸಕಾಲ ಸಪ್ತಾಹ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮತ್ತು ಸಾಂಖ್ಯಿಕ ಇಲಾಖೆÀಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದ ಜನನ ಮರಣ ಸಕಾಲ ಸಪ್ತಾಹ ಅರಿವು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಸಕಾಲ ಸಪ್ತಾಹವನ್ನು ಹಮ್ಮಿಕೊಂಡಿದ್ದು ಇದರ ಮುಖ್ಯ ಉದ್ದೇಶ ಜನನ ಅಥವಾ ಮರಣವಾದ 21ದಿನದ ಒಳಗಡೆ ಅರ್ಜಿಯನ್ನು ನಾಡಕಛೇರಿ, ತಹಶೀಲ್ದಾರ್ ಕಛೇರಿ ಅಥವಾ ಪುರಸಭೆಗಳಲ್ಲಿ ಸಲ್ಲಿಸಿದರೇ ಒಂದು ವಾರದ ಒಳಗಡೆ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ ಎಂದರು.
ಈ ಜನನ,ಮರಣ ಪತ್ರಗಳಿಂದ ಬಹಳ ಅನುಕೂಲವಾಗುತ್ತೆ ಮಕ್ಳಳನ್ನು ಶಾಲೆಗೆ ಸೇರಿಸಲು, ಯಾರಾದರೂ ಮರಣ ಹೊಂದಿದರೇ ಅವರ ಪೋತಿ ಖಾತೆ ಮಾಡಿಸಿಕೊಳ್ಳಲು, ವಿಮಾ ಹಣ ಪಡೆಯಲು, ವಾರಸುದಾರರನ್ನು ಗುರುತಿಸಲು ಬಹಳ ಅನುಕೂಲವಾಗುತ್ತದೆ ಎಂದರು.
ಸಾರ್ವಜನಿಕರು ಈ ಸಕಾಲ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಂಡ್ಯ ಜಿಲ್ಲೆ ಸಕಾಲದಲ್ಲಿ ಇಡೀ ಕರ್ನಾಟಕದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದು ಸಾರ್ವಜನಿಕರು ಮತ್ತು ನಮ್ಮ ಆಡಳಿತ ಚುಕ್ಕಾಣಿ ಹಿಡಿದಂತಹ ಅಧಿಕಾರಿಗಳ ಸಹಾಯದಿಂದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಾಂಖ್ಯಿಕ ಅಧಿಕಾರಿಗಳು ಕೂಡ ಉತ್ತಮವಾಗಿ ಕೆಲಸ ಮಾಡಿ ಇ-ಜನ್ಮದ ಮುಖಾಂತರ ಜನನ ಮತ್ತು ಮರಣ ಪ್ರಮಾಣಪತ್ರವನ್ನು ಕಾಲಮಿತಿಯಲ್ಲಿ ನೀಡುತ್ತಾರೆ ಎಂದರು.
21 ದಿನಗಳು ಮುಗಿದ ನಂತರ ಅರ್ಜಿ ಸಲ್ಲಿಸಿದರೇ ಅದು 21 ದಿನದಿಂದ 1 ವರ್ಷದವರೆಗೆ ತಹಶೀಲ್ದಾರ್ ಕಛೇರಿಗೆ ಅರ್ಜಿಯನ್ನು ಸಲ್ಲಿಸಿ, ತಹಶೀಲ್ದಾರ್ ರವರು ಪರಿಶೀಲನೆ ಮಾಡುತ್ತಾರೆ, ನಂತರ ಪ್ರಮಾಣಪತ್ರವನ್ನು ತೆಗೆದುಕೊಂಡು ಅದರ ಪ್ರಕರಣ ನೈಜತೆಯಿಂದ ಕೂಡಿದ್ದರೇ ಮಹಜರು ಮಾಡುವ ಸಂದರ್ಭದಲ್ಲಿ ಸಮರ್ಪಕವಾಗಿ ಮಾಹಿತಿಯನ್ನು ಕೊಟ್ಟರೇ ವಿಳಂಬವಾಗಲು ಏನು ಕಾರಣ ತಿಳಿದು ಒಂದು ವರ್ಷದ ಕಾಲಮಿತಿಯಿದ್ದರೇ ತಹಶೀಲ್ದಾರರು ವಿಳಂಬವನ್ನು ಮನ್ನಾ ಮಾಡಿ ಪ್ರಮಾಣಪತ್ರವನ್ನು ನೀಡುತ್ತಾರೆ, ಒಂದು ವರ್ಷ ಮೇಲ್ಪಟ್ಟರೇ ಅವರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಅಲ್ಲಿಂದ ಪ್ರಮಾಣಪತ್ರ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಆಯುಕ್ತರಾದ ಎಸ್.ಲೋಕೇಶ್‍ರವರು, ಮಂಡ್ಯ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್‍ಗಳಾದ ವಸಂತಕುಮಾರ್ ರವರು, ಸಾಂಖ್ಯಿಕ ಅಧಿಕಾರಿ ಶಿವಮ್ಮರವರು, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಚೇತನ್‍ರವರು ಮತ್ತಿತರರು ಉಪಸ್ಥಿತರಿದ್ದರು.