ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಘಟನೆ ಸಂಬಂಧ ಕೊಹ್ಲಿ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ, ನೈಜ ಹೋರಾಟಗಾರರ ವೇದಿಕೆ ಪದಾಧಿಕಾರಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ. ಈ ಸಂಬಂಧ ಪೊಲೀಸರು ದೂರಿನ ಪ್ರತಿ ಪಡೆದು, ಹಿಂಬರಹ ನೀಡಿದ್ದಾರೆ.
ಕಾಲ್ತುಳಿತದ ಸಂಬಂಧ ಈಗಾಗಲೇ ದಾಖಲಾಗಿರುವ ಎಫ್ಐಆರ್‌ಗಳ ಜೊತೆಗೆ ಈ ದೂರನ್ನು ತನಿಖೆಗೆ ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದು, ನೈಜ ಹೋರಾಟಗಾರರ ವೇದಿಕೆಯ ಎಂ.ವೆಂಕಟೇಶ್ ಅವರಿಗೆ ಹಿಂಬರಹ ಕೊಟ್ಟಿದ್ದಾರೆ.
ಬುಧವಾರ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಎಂ. ಚಿನ್ನಸ್ವಾಮಿ ಮೈದಾನದ ಬಳಿ ನೂಕುನುಗ್ಗಲಾಗಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸಂಬಂಧ ಈಗಾಗಲೇ, ಆರ್‌ಸಿಬಿ, ಕೆಎಸ್ಸಿಎ ಹಾಗೂ ಆಯೋಜಕ ಸಂಸ್ಥೆ ಡಿಎನ್ಎಯ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆಲ್ಲದೆ, ಹೈಕೋರ್ಟ್ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಜೊತೆಗೆ, ರಾಜ್ಯ ಸರ್ಕಾರವು ಮ್ಯಾಜಿಸ್ಟ್ರೇಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಏಕಸದಸ್ಯ ಆಯೋಗ ರಚಿಸಿ, ತನಿಖೆಗೆ ಆದೇಶ ಹೊರಡಿಸಿದೆ. ಪ್ರಕರಣದ ಬೆನ್ನಲ್ಲೇ ಕರ್ತವ್ಯ ವೈಫಲ್ಯ ಆರೋಪದ ಮೇಲೆ ನಗರ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ