ಅಯೋಧ್ಯ,,ಡಿ.17-ಬಾಬರಿ ಮಸೀದಿ ಸ್ಥಳದಿಂದ ಸ್ಥಳಾಂತರಿಸಿರುವ ಮಸೀದಿ ನಿರ್ಮಾಣ ಕಾರ್ಯಕ್ಕೆ ಗಣರಾಜ್ಯೋತ್ಸವದಂದು ಶಂಕು ಸ್ಥಾಪನೆ ನೆರವೇರಿಸಲು ತೀರ್ಮಾನಿಸಲಾಗಿದೆ. ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಐದು ಎಕರೆ ಪ್ರದೇಶದಲ್ಲಿ ಹೊಸ ಮಸೀದಿ ನಿರ್ಮಾಣ ಮಾಡಲು ಟ್ರಸ್ಟ್ ಸದಸ್ಯರು ತೀರ್ಮಾನಿಸಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದ ದಿನವಾದ ಗಣರಾಜ್ಯೋತ್ಸವದಂದು ಏಕತೆ ಸಂಕೇತವಾಗಿ ಅಂದು ಮಸೀದಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದೇವೆ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅತ್ತಾರ್ ಹುಸೇನ್ ತಿಳಿಸಿದ್ದಾರೆ.
ಮಸೀದಿ ನಿರ್ಮಾಣ ಸ್ಥಳದಲ್ಲಿ ಬಹುಪಯೋಗಿ ಆಸ್ಪತ್ರೆ, ಗ್ರಂಥಾಲಯ ಮತ್ತಿತರ ಕೇಂದ್ರಗಳನ್ನು ಸ್ಥಾಪಿಸುವುದರ ಜತೆಗೆ ಏಕಕಾಲಕ್ಕೆ 2000 ಮಂದಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.
ಶತಮಾನಗಳಿಂದ ವಿವಾದಕ್ಕೆ ಈಡಾಗಿದ್ದ ರಾಮಮಂದಿರ ವಿವಾದವನ್ನು ಇತ್ಯರ್ಥಗೊಳಿಸಿದ್ದ ಸುಪ್ರಿಂ ಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿ ಬಾಬರಿ ಮಸೀದಿ ತೆರವು ಮಾಡಿ ಬೇರೆಡೆ ಮಸೀದಿ ನಿರ್ಮಿಸಲು ಅನುಮತಿ ನೀಡಿತ್ತು.