ಚಾಮರಾಜನಗರ(ಡಿಸೆಂಬರ್. 16): ಚಾಮರಾಜನಗರ ಜಿಲ್ಲೆಯಲ್ಲಿ ಕೆರೆ ನೀರು ತುಂಬಿಸುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನೇ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಮೂರು ಹಾಗು ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರೈತರೊಬ್ಬರೊಡನೆ ಪೋನ್ ನಲ್ಲಿ ಮಾತನಾಡುತ್ತಾ ಉಸ್ತುವಾರಿ ಸಚಿವರನ್ನೆ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ್ದಾರೆ. ಅಲ್ಲದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಮನಬಂದಂತೆ ಹೀನಾಮಾನವಾಗಿ ನಿಂದಿಸಿ ಬೈಯ್ದಿರುವ ಆಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ನಿರಂಜನ್ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳನ್ನು ಏಕವಚನದಲ್ಲೇ ಸಂಬೋಧಿಸಿರುವ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವಂತೆ ರೈತರನ್ನು ಪ್ರಚೋಧಿಸಿರುವ ಆಡಿಯೋ ಬಹಿರಂಗಗೊಂಡಿದೆ.
ರೈತರೊಬ್ಬರು ಶಾಸಕ ಪುಟ್ಟರಂಗಶೆಟ್ಟಿಗೆ ದೂರವಾಣಿ ಕರೆ ಮಾಡಿ ಮೂರನೇ ಹಂತದ ಕಿಲೆಗೆರೆ ಕೆರೆಗೆ ನೀರು ಬಿಡದೆ ನಾಲ್ಕನೇ ಹಂತದ ಕೆರೆಗೆ ನೀರು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪುಟ್ಟರಂಗಶೆಟ್ಟಿ, ನೀವು ಯಾರು ಕೇಳ್ತಾ ಇಲ್ಲ , ವಡ್ಡಗೆರೆ ಕಡೆಯವರು ಪ್ರತಿಭಟನೆ ಮಾಡಿದ್ದಾರೆ, ನೀವು ಒಂದು ದಿನವಾದರು ಪ್ರತಿಭಟನೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಹೋಗಿ ವಡ್ಡಗೆರೆ ಕೆರೆಗೆ ನೀರು ಬಿಟ್ಟಿರುವುದನ್ನು ತಡೆಯಿರಿ, ಹೀಗೆ ತಡೆದರೆ ಇಂಜಿನಿಯರ್ ಬರುತ್ತಾರೆ , ಅವರಿಗೆ ಕ್ಯಾಕರಿಸಿ ಉಗಿಯಿರಿ , ಮರ್ಯಾದೆಯಾಗಿ ಮೂರನೇ ಹಂತದ ಕೆರೆಗಳನ್ನು ತುಂಬಿಸಿ ನಂತರ ನಾಲ್ಕನೆ ಹಂತಕ್ಕೆ ಬಿಡು ಎಂದು ತುಚ್ಛಪದಗಳಿಂದ ಕಾವೇರಿ ನೀರಾವರಿ ನಿಗಮದ ಇಂಜಿನಿಯರನ್ನು ಶಾಸಕರು ನಿಂದಿಸಿದ್ದಾರೆ.