ಬೆಂಗಳೂರು,ಡಿ.16- ವಿಧಾನಪರಿಷತ್‍ನಲ್ಲಿ ನಿನ್ನೆ ನಡೆದ ಕೋಲಾಹಲದ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಮುಂದಾಗಿದ್ದರಾದರೂ ಕಾಂಗ್ರೆಸ್ ಅವರನ್ನು ತಡೆದಿದೆ.
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಇಷ್ಟೆಲ್ಲಾ ರಂಪಾಟವಾದ ಮೇಲೂ ಹುದ್ದೆಯಲ್ಲಿ ಮುಂದುವರೆದರೆ ತಾವು ಅಧಿಕಾರಕ್ಕೆ ಅಂಟಿಕೊಂಡವರು ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಸಭಾಪತಿ ಹುದ್ದೆಗೆ ಅದು ಘನತೆ ತರುವುದಿಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಅವಿಶ್ವಾಸ ಮಂಡನೆಯಾದ ದಿನದಿಂದಲೂ ಆಂತರಿಕವಾಗಿ ಹೇಳುತ್ತಲೇ ಬಂದಿದ್ದಾರೆ.
ಆದರೆ ಅದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ್ ಅವರು ತಡೆ ಒಡಿದ್ದು, ವಿಧಾನಪರಿಷತ್‍ನಲ್ಲಿ ಅವಿಶ್ವಾಸ ಸೂಚನೆ ಚರ್ಚೆಯಾಗಿ ಮತದಾನದ ಕ್ಷಣದವರೆಗೂ ರಾಜೀನಾಮೆ ಪ್ರಸ್ತಾಪ ಮಾಡಬೇಡಿ ಎಂದು ಪ್ರತಾಪ್‍ಚಂದ್ರ ಶೆಟ್ಟಿ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ವಿಧಾನಪರಿಷತ್‍ನಲ್ಲಿ ಯಾವ ನಿಲುವು ತೆಗೆದುಕೊಂಡಿದೆ ಎಂಬುದು ಜನರಿಗೆ ಗೊತ್ತಾಗಬೇಕು. ಚರ್ಚೆಗಳು ದಾಖಲೆಗಳಾಗಿ ಉಳಿಯಬೇಕು, ಬಿಜೆಪಿ ಬೇಕಿದ್ದರೆ ಕಾನೂನು ಹೋರಾಟವನ್ನು ಮುಂದುವರೆಸಲಿ. ಏನೇ ಆದರೂ ಸದ್ಯಕ್ಕೆ ರಾಜೀನಾಮೆ ನೀಡಬೇಡಿ ಎಂದು ತಡೆದಿದ್ದಾರೆ ಎನ್ನಲಾಗಿದೆ.