ವಿಜಯಪುರ: ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದೆ. ಚುನಾವಣಾ ಅಭ್ಯರ್ಥಿಗಳು ಲೋಕಲ್ ದಂಗಲ್ ನಲ್ಲಿ ಜಯಗಳಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯಲ್ಲಿ ಒಂದೇ ವಾರ್ಡ್ ನಲ್ಲಿ ಪತಿ- ಪತ್ನಿ ಅಖಾಡಕ್ಕಿಳಿಯುವ ಮೂಲಕ ಜನರ ಗಮನ ಸೆಳೆದಿದ್ದಾರೆ.
ಹೌದು.. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯತಿಯ ಸಂನಾಳ ಗ್ರಾಮದಲ್ಲಿ ಒಂದೇ ವಾರ್ಡ್ ನಲ್ಲಿ ಚುನಾವಣೆ ಅಖಾಡಕ್ಕಿಳಿಯುವ ಮೂಲಕ ಪತ್ನಿ ಪತ್ನಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹುಸೇನಸಾಬ್ ಮುಲ್ಲಾ ಗ್ರಾಮದ 3ನೇ ವಾರ್ಡ್ ನಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ, ಹಾಗೂ ಆತನ ಪತ್ನಿ ಮಾಲನಬಿ ಮುಲ್ಲಾ 3ನೇ ವಾರ್ಡ್ ನ ಹಿಂದುಳಿದ ವರ್ಗ ಅ ಮಹಿಳಾ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.
ಗಂಡ ಹೆಂಡತಿ ಇಬ್ಬರು ತಮ್ಮ 66ನೇ ಇಳಿಯ ವಯಸ್ಸಿನಲ್ಲಿಯೂ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಡಿ. 22 ರಂದು ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಾದರೆ ಡಿ. 24 ರಂದು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಡಿ. 30 ರಂದು ಮತ ಎಣಿಕೆ ನಡೆಯಲಿದೆ.
ಇನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯ ಹತ್ತರಗಿ ಗ್ರಾಮ ಪಂಚಾಯಿತಿಗೆ ಪತಿ ಪತ್ನಿ ಅವಿರೋಧ ಆಯ್ಕೆಯಾಗಿದ್ದಾರೆ. ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.