ಹುಬ್ಬಳ್ಳಿ: ಜಿಲ್ಲೆಯಿಂದ ಹೈದರಾಬಾದ್ಗೆ ಹೋಗಿ ಬರುವ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಐರಾವತ ವೋಲ್ವೊ ಎಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು, ಸಾರ್ವಜನಿಕರ ಸಮಕ್ಷಮದಲ್ಲಿ ಬಸ್ಗೆ ಪೂಜೆ ಸಲ್ಲಿಸಿ ನೂತನ ಮಾರ್ಗಕ್ಕೆ ಶುಭ ಹಾರೈಸಿ ಮಾತನಾಡಿದ ಅವರು, ವಾಣಿಜ್ಯ, ವಹಿವಾಟು ಮತ್ತಿತರ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ – ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಿಂದ ಪ್ರಯಾಣ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಎಸಿ ಸ್ಲೀಪರ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ಜೊತೆಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈಗ ಐರಾವತ ವೋಲ್ವೊ ಎಸಿ ಸೆಮಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತದೆ ಎಂದು ಮಾಹಿತಿ ನೀಡಿದರು.
ಇಂತಿದೆ ವೇಳಾಪಟ್ಟಿ
ಹುಬ್ಬಳ್ಳಿ- ಹೈದರಾಬಾದ್ : ಗೋಕುಲ ರಸ್ತೆ ಬಸ್ ನಿಲ್ದಾಣ ರಾತ್ರಿ 9-00ಗಂಟೆ, ಹೊಸೂರು ಬಸ್ ನಿಲ್ದಾಣ 9-15 ಗದಗ ರಾ.10-15, ಕೊಪ್ಪಳ ರಾ.11-30, ಗಂಗಾವತಿ ರಾ.01-45, ಸಿಂಧನೂರು ಬೆಳಗ್ಗೆ 2-00, ರಾಯಚೂರು ಬೆ.3-30ಕ್ಕೆ ಹೊರಟು ಶಕ್ತಿನಗರ, ಮೆಹಬೂಬ ನಗರ ಮಾರ್ಗವಾಗಿ ಮರುದಿನ ಬೆಳಗ್ಗೆ 7-00 ಕ್ಕೆ ಹೈದರಾಬಾದ್ ತಲುಪುತ್ತದೆ.
ಹೈದರಾಬಾದ್ – ಹುಬ್ಬಳ್ಳಿ: ಹೈದರಾಬಾದ್ ನ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದಿಂದ ರಾತ್ರಿ 10-00ಗಂಟೆಗೆ ಹೊಡುತ್ತದೆ. ಮರುದಿನ ಬೆಳಗ್ಗೆ 8-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.