ಹಾಸನ, ಡಿ.16- ಹಾಸನ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಹಾನಿಗೆ ರಾಜ್ಯ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಬೆಳೆನಷ್ಟವಲ್ಲದೆ ಮನೆಗಳೂ ಬಿದ್ದು ಹೋಗಿವೆ. ಅವುಗಳಿಗೆ ಪರಿಹಾರ ನೀಡಿಲ್ಲ. ಹೂವಿನ ಬೆಳೆ ಕೂಡ ಹಾನಿಯಾಗಿದ್ದು, ಅದರ ಸರ್ವೆ ಕೂಡ ಸರ್ಕಾರ ಮಾಡಿಲ್ಲ ಎಂದು ದೂರಿದರು.
ಈ ಎಲ್ಲ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಆದರೆ, ಅವರು ಗ್ರಾಪಂ ಚುನಾವಣೆಯಲ್ಲಿ ಬ್ಯುಜಿಯಾಗಿದ್ದಾರೆ ಎಂದು ಟೀಕಿಸಿದರು. ರೈತರಿಂದ ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ದಾವಿಸಬೇಕು. ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲಾ-ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ವಗ್ರಾಮದಲ್ಲೇ ವೈದ್ಯರಿಲ್ಲ ಎಂದ ಅವರು, ಹಾಸನದ ಸುತ್ತಮುತ್ತ ಇರುವ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಕೆಲ ಅಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಾನೂನು ಪ್ರಕಾರ ರಿಯಲ್ ಎಸ್ಟೇಟ್ ಮಾರಲು ಅವಕಾಶ ಮಾಡಿಕೊಡಲಿ. ಈ ಸಂಬಂಧ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ತನಿಖೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.