ಬೆಂಗಳೂರು(ಡಿ. 14): ಸಾರಿಗೆ ನೌಕರರ ಮುಷ್ಕರ ನಾಟಕೀಯ ತಿರುವು ಪಡೆಯುತ್ತಲೇ ಇದೆ. ಇವತ್ತು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವಂತೆಯೇ ಇದೀಗ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಹೊಸ ಷರತ್ತು ಮುಂದಿಟ್ಟಿದ್ದಾರೆ. ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ ಒಬ್ಬ ಸಚಿವರ ಮೂಲಕ ಈ ಲಿಖಿತ ಭರವಸೆಯನ್ನು ಈ ಸ್ಥಳಕ್ಕೆ ಬಂದು ತಲುಪಲಿ. ಆ ನಂತರ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
