ಬೆಂಗಳೂರು, ಜು.14- ಸರ್ಕಾರದ ನೋಟಿಸ್‍ನಂತೆ ಆಗಸ್ಟ್ 1ರಂದು ನಾನು 35, ಲೋದಿ ಎಸ್ಟೇಟ್ ಬಂಗಲೆಯನ್ನು ಖಾಲಿ ಮಾಡಲಿದ್ದೇನೆ. ಮನೆ ಖಾಲಿ ಮಾಡಿಸದಂತೆ ನಾನು ಯಾರ ಬಳಿಯೂ ಮನವಿ ಮಾಡಿಲ್ಲ ಎಂದು ಎಐಸಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾರ್ದಾ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ವರದಿಯನ್ನು ಟ್ಯಾಗ್ ಮಾಡಿರುವ ಅವರು, ಇದು ಫೆಕ್ ನ್ಯೂಸ್ ಎಂದು ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮನೆ ಖಾಲಿ ಮಾಡುವಂತೆ ನನಗೆ ಜುಲೈ 1ರಂದು ಸರ್ಕಾರ ನೋಟಿಸ್ ನೀಡಿದೆ. ಅದರಂತೆ ನಾನು ಆಗಸ್ಟ್ ಒಂದರಂದು ಮನೆ ಖಾಲಿ ಮಾಡಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಪ್ರಿಯಾಂಕ ಅವರು ಮನೆ ಖಾಲಿ ಮಾಡಿಸದಂತೆ ಮತ್ತು ಮತ್ತಷ್ಟು ಕಾಲಾವಧಿಯನ್ನು ವಿಸ್ತರಣೆ ಮಾಡುವಂತೆ ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ಅವರು, ನಾನು ಆ ರೀತಿ ಯಾವುದೇ ಮನವಿ ಮಾಡಿಲ್ಲ. ಸರ್ಕಾರ ನೀಡಿದ್ದ ಸರ್ಕಾರಿ ವಸತಿ ವ್ಯವಸ್ಥೆಯನ್ನು ಖಾಲಿ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಈ ಮೊದಲು ಪ್ರಿಯಾಂಕ ಅವರಿಗೆ ನೀಡಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ಸರ್ಕಾರ ಹಿಂಪಡೆದಿತ್ತು.
ಉತ್ತರ ಪ್ರದೇಶದ ರಾಜಕಾರಣದ ಕುರಿತು ಪ್ರಿಯಾಂಕ ಜೋರು ಧ್ವನಿಯಲ್ಲಿ ಮಾತನಾಡಲಾರಂಭಿಸಿದ ಬೆನ್ನಲ್ಲೆ ದೆಹಲಿಯಲ್ಲಿ ನೀಡಲಾಗಿದ್ದ ಬಂಗಲೆಯನ್ನು ಖಾಲಿ ಮಾಡುವಂತೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೋಟಿಸ್ ನೀಡಿತ್ತು.
ಮನೆ ಖಾಲಿ ಮಾಡುವಂತೆ ನೀಡಿದ್ದ ನೋಟಿಸ್ ಪ್ರಿಯಾಂಕ ಒಪ್ಪಿಕೊಂಡ ಬೆನ್ನಲ್ಲೇ, ಮನೆ ಖಾಲಿ ಮಾಡಲು ನಿರಾಕರಿಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಅಪಪ್ರಚಾರ ನಡೆದಿತ್ತು. ಅದಕ್ಕೆ ಪ್ರಿಯಾಂಕ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.