ಗದಗ : ಸರ್ವ ಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿಕೊಟ್ಟರು. ಜೊತೆಗೆ ನಮ್ಮ ಕರ್ತವ್ಯ ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ. ಅದೇ ರೀತಿ ಬಾಬು ಜಗಜೀವನರಾಮ್ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಗದಗ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 118ನೇ ಜಯಂತ್ಯೋತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಆಶಯಗಳು ಇಂದಿನ ಕಾಲದಲ್ಲಿ ಸಾಕಾರಗೊಂಡಿವೆಯಾ ಎಂದು ನಮ್ಮನ್ನ ನಾವು ಪ್ರಶ್ನಿಸಬೇಕಿದೆ. ಅಸ್ಪೃಷ್ಯತೆಯಿಂದ ಅಂಬೇಡ್ಕರ್ ನೋವು ಉಂಡಿದ್ದರು. ದೇಶದಲ್ಲಿದ್ದ ಅನಿಷ್ಟ ಪದ್ದತಿ ಹೋಗಲಾಡಿಸಲು ಸತತ ಓದು, ಅಧ್ಯಯನ ಮಾಡಿ ಸಂವಿಧಾನ ರಚಿಸಿದರು. ಸಮಾನತೆ, ಸಮಬಾಳಿನಿಂದ ಬದುಕುಲು ತಿಳಿಸಿದರು. ಆದರೆ, ಕಳೆದ 75 ವರ್ಷ ಸಮಾನತೆಯಿಂದ ಮೂಡಿದೆಯೇ ಎಂದು ಪ್ರಶ್ನಿಸಿದರು.
ರಾಜಕೀಯದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಗಿದೆ. ಆದರೆ, ಸಾಮಾಜಿಕ ಅಸ್ಪೃಶ್ಯತೆ ಇನ್ನೂ ಬೇರೂರಿದೆ. ಗ್ರಾಮಗಳಲ್ಲಿ ಈ ಪರಿಸ್ಥಿತಿ ಇನ್ನೂ ಇದೆ. ಸಾಮಾಜಿಕ ತೀವ್ರ ಸುಧಾರಣೆ ಪ್ರಸ್ತುತ ಅತ್ಯಂತ ಅವಶ್ಯವಿದೆ. ಆರ್ಥಿಕ ಸುಧಾರಣೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಹಿಂದುಳಿದ ಸಮುದಾಯಕ್ಕೆ ಸರ್ಕಾರ ಅನೇಕ ಸೌಲಭ್ಯ ನೀಡಿದೆ. ಶಿಕ್ಷಣ, ಪುಸ್ತಕ, ವಸತಿಗೆ ಶುಲ್ಕ ನೀವು ನೀಡುವಂತಿಲ್ಲ. ವಿದ್ಯಾರ್ಥಿ ವೇತನ ಸರ್ಕಾರ ನೀಡುತ್ತದೆ. ಎಲ್ಲ ಸೌಲಭ್ಯ ಪಡೆದು ಮಕ್ಕಳನ್ನು ಆಸ್ತಿಯನ್ನಾಗಿಸಬೇಕು. ನಿಮ್ಮ ಬೆಳವಣಿಗೆ ನೀವೇ ಕಾರಣ ಆಗಬೇಕು ಎಂದರು.