ಬೆಂಗಳೂರು,ಜು.14- ಹಲವು ಸಂಕಷ್ಟಗಳ ನಡುವೆ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಶೇ. 61.81ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪಿಯು ಪರೀಕ್ಷಾ ಮಂಡಳಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು, ಫಲಿತಾಂಶದ ವಿವರಗಳನ್ನು ಪ್ರಕಟಿಸಿದರು.ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆ ಮಾರ್ಚ್ 23ರಿಂದ ನಡೆದಿತ್ತು. ರಾಜ್ಯದಲ್ಲಿ 6,75,277 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಹೊಸಬರು 5,56,267 ಹಾಜರಾಗಿದ್ದು, 3,84,947 ಮಂದಿ ತೇರ್ಗಡೆ ಹೊಂದಿದ್ದಾರೆ. ಇದು ಶೇ.69.20ರಷ್ಟು ಫಲಿತಾಂಶವಾಗಿದೆ. ಹಿಂದಿನ ವರ್ಷ ಶೇ.68ರಷ್ಟು ತೇರ್ಗಡೆ ಹೊಂದಿದ್ದರು.
91,025 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 25,602 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ.46.56ರಷ್ಟು ಮಂದಿ ಉತ್ತೀರ್ಣರಾಗಿದ್ದು, ಹಿಂದಿನ ವರ್ಷಕ್ಕಿಂತ ಉತ್ತಮ ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.27.37ರಷ್ಟು ವಿದ್ಯಾರ್ಥಿಗಳು ರ್ತೇಗಡೆ ಹೊಂದಿದ್ದರು.
ಖಾಸಗಿ ವಿದ್ಯಾರ್ಥಿಗಳು 27,985 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 6,748 ಮಂದಿ ತೇರ್ಗಡೆ ಹೊಂದಿದ್ದಾರೆ. ಇದು ಶೇ.24.11ರಷ್ಟಿದೆ. ಒಟ್ಟಾರೆ ಫಲಿತಾಂಶ ಶೇ.61.80ರಷ್ಟು ಬಂದಿದೆ ಎಂದು ಹೇಳಿದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ಯಾವುದೇ ಅವಘಡ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಯಿತು. ರಾಜ್ಯಾದ್ಯಂತ 1,016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ನವೆಂಬರ್‍ನಿಂದಲೇ ಪರೀಕ್ಷಾ ಸಿದ್ದತೆಗಳನ್ನು ಆರಂಭಿಸಲಾಗಿತ್ತು. ಪರೀಕ್ಷಾ ಪ್ರವೇಶ ಪತ್ರ ಕಳುಹಿಸುವುದು ಸೇರಿದಂತೆ ಎಲ್ಲ ರೀತಿಯ ತಯಾರಿಗಳು ವ್ಯವಸ್ಥಿತವಾಗಿ ನಡೆದಿದ್ದವು ಎಂದು ಹೇಳಿದರು.
ಪರೀಕ್ಷೆಯ ನಂತರ 70 ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದು, 11,970 ಮಂದಿ ಮೌಲ್ಯಮಾಪಕರು ಹಾಜರಿದ್ದರು ಎಂದು ತಿಳಿಸಿದರು.
ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಗಲಿರುಳು ಶ್ರಮಿಸಿದ್ದಾರೆ. ಅವರಿಂದಾಗಿ ಸುರಕ್ಷಿತ ಪರೀಕ್ಷೆ ನಡೆದಿದೆ ಎಂದು ಸುರೇಶ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.